ಉಡುಪಿ: ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಇದರ ಆಶ್ರಯದಲ್ಲಿ “ಉಡುಪಿ ಪ್ರವಾಸೋದ್ಯಮ” ಇಂದು ಮತ್ತು ನಾಳೆ ಎಂಬ ವಿಚಾರ ಗೋಷ್ಠಿಯನ್ನು ಉಡುಪಿ ಕಿದಿಯೂರು ಹೋಟೆಲ್ ನ ಮಾಧವಕೃಷ್ಣ ಸಭಾಭವನದಲ್ಲಿ ಜುಲೈ 20ರಂದು ಆಯೋಜಿಸಲಾಗಿದೆ ಎಂದು ಉಡುಪಿ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಅಮ್ಮುಂಜೆ ಪ್ರಭಾಕರ ನಾಯಕ್ ತಿಳಿಸಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಚಾರಗೋಷ್ಠಿಯಲ್ಲಿ ಉಡುಪಿ ಪ್ರವಾಸೋದ್ಯಮದ ಪ್ರಸ್ತುತ ಪರಿಸ್ಥಿತಿ, ಅವಕಾಶಗಳು, ಸಮಸ್ಯೆಗಳು, ನಿರೀಕ್ಷೆಗಳು ಹಾಗೂ ಬೆಳವಣಿಗೆ ಕುರಿತು ಪ್ರವಾಸೋದ್ಯಮದ ಪಾಲುದಾರರು, ಸಂಘಟಕರು, ಅನುಭವಿಗಳು ಅಭಿಪ್ರಾಯ ಮಂಡಿಸಲಿದ್ದಾರೆ ಎಂದರು. ಅಂದು ಬೆಳಿಗ್ಗೆ 10.30ಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬ್ಯಾಂಕ್ ಯೂನಿಯನ್ ಬ್ಯಾಂಕ್ ಪ್ರೇರಕರಾಗಿ ಭಾಗವಹಿಸುತ್ತಿದ್ದು, ಜಿಲ್ಲೆಯ ಪ್ರವಾಸೋದ್ಯಮದ ಅರ್ಹ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳನ್ನು ನೀಡುವ ಕುರಿತು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಟೂರ್ಸ್ & ಟ್ರಾವೆಲ್ಸ್ ಸಂಘಟನೆಯ ಅಧ್ಯಕ್ಷ ಮರವಂತೆ ನಾಗರಾಜ ಹೆಬ್ಬಾರ್, ಚೇಂಬರ್ ಉಪಾಧ್ಯಕ್ಷ ಕೆ. ನಟರಾಜ್ ಪ್ರಭು, ನಿರ್ದೇಶಕರಾದ ಡಾ. ವಿಜಯೇಂದ್ರ, ವಾಲ್ಟರ್ ಸಲ್ಡಾನ್ಹಾ, ಮಹಮ್ಮದ್ ಮೌಲಾ ಉಪಸ್ಥಿತರಿದ್ದರು.