ಮಣಿಪಾಲ: ಮಣಿಪಾಲ—ಮಕ್ಕಳ ಆಂಕೊಲಾಜಿ ವಿಭಾಗದ ಐತಿಹಾಸಿಕ ಬೆಳವಣಿಗೆಯಲ್ಲಿ, ಹೆಚ್ಚಿನ ಅಪಾಯದ ನ್ಯೂರೋಬ್ಲಾಸ್ಟೊಮಾದಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಡೈನುಟುಕ್ಸಿಮಾಬ್ ಬೀಟಾ ಎಂಬ ಜೀವ ಉಳಿಸುವ ಇಮ್ಯುನೊಥೆರಪಿಯನ್ನು ನೀಡಲಾಗಿದೆ. ಈ ಇಮ್ಯುನೊಥೆರಪಿ ಪ್ರಸ್ತುತ ಈ ಆಕ್ರಮಣಕಾರಿ ಕ್ಯಾನ್ಸರ್ ಅನ್ನು ಗುಣಪಡಿಸುವ ಏಕೈಕ ಚಿಕಿತ್ಸೆಯಾಗಿದೆ.
ಹೆಚ್ಚಿನ ಅಪಾಯದ ನ್ಯೂರೋಬ್ಲಾಸ್ಟೊಮಾ ಬಾಲ್ಯದಲ್ಲಿ ಬರುವ ಅಪರೂಪದ ಮತ್ತು ಸಂಕೀರ್ಣವಾದ ಕ್ಯಾನ್ಸರ್ ಆಗಿದ್ದು, ಇದಕ್ಕೆ ಸಾದಾರಣವಾಗಿ ನೀಡುವ ಕಿಮೊಥೆರಪಿ, ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆಯ ಜೊತೆಗೆ ಮೂಳೆ ಮಜ್ಜೆಯ ಕಸಿ, ಮತ್ತು ಇಮ್ಯುನೊಥೆರಪಿ ಅಗತ್ಯವಿರುತ್ತದೆ. ಆದ್ದರಿಂದ ಈ ಎಲ್ಲ ಚಿಕಿತ್ಸೆಯನ್ನು ಸಂಯೋಜಿಸುವ ಬಹುಶಿಸ್ತೀಯ ತಂಡದ ಅಗತ್ಯವಿರುತ್ತದೆ. ಡಿನುಟುಕ್ಸಿಮಾಬ್ ಬೀಟಾ ಇತ್ತೀಚೆಗೆ ಅನುಮೋದಿತ ಇಮ್ಯುನೊಥೆರಪಿ ಔಷಧವಾಗಿದ್ದು, ಇದು ಆಯ್ದ ನ್ಯೂರೋಬ್ಲಾಸ್ಟೊಮಾ ಕ್ಯಾನ್ಸರ್ ಕೋಶಗಳನ್ನು ನಾಶಮಾಡಿ, ಮಕ್ಕಳಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಫಲಿತಾಂಶ ಮತ್ತು ಬದುಕುಳಿಯುವಿಕೆಯು 30-40% ರಷ್ಟು ಹೆಚ್ಚಾಗಿದೆ. ಈ ಔಷಧವನ್ನು ಪ್ರಸ್ತುತ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದೆ.
ಈ ಪ್ರಕರಣದಲ್ಲಿ ಸವಾಲೆಂದರೆ ಇಮ್ಯುನೊಥೆರಪಿ ಚಿಕಿತ್ಸೆ ನೀಡುವ ವಿದಾನದಬಗ್ಗೆ ಮಾಹಿತಿಯ ಅಗತ್ಯತೆ ಮತ್ತು ಔಷಧವನ್ನು ಆಮದು ಮಾಡಿಕೊಳ್ಳಲು ಹಣಕಾಸು ವ್ಯವಸ್ಥೆ ಮಾಡುವುದಾಗಿತ್ತು. ಮಕ್ಕಳ ಆಂಕೊಲಾಜಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ ಅವರ ಮಾರ್ಗದರ್ಶನದ ಮೇಲೆ ನುರಿತ ವೈದ್ಯರ ತಂಡವು ಈ ಇಮ್ಮ್ಯುನೊಥೆರಪಿ ಚಿಕಿತ್ಸೆಯನ್ನು ನೀಡಿದರು ಹಾಗು ಈ ನವೀನ ಚಿಕಿತ್ಸೆಗೆ, ಸೇವ್ ದಿ ಡ್ರೀಮ್ಸ್, ಮಣಿಪಾಲ್ ಫೌಂಡೇಶನ್ ಮತ್ತು ಒನ್ ಗುಡ್ ಸ್ಟೆಪ್ ಫೌಂಡೇಶನ್‌ನಂತಹ ಪ್ರತಿಷ್ಠಾನಗಳ ಸಹಕಾರದಿಂದ ಪೋಷಕರಿಗೆ ಹಣಕಾಸು ಹೊಂದಿಸಲು ಸಾಧ್ಯವಾಯಿತು. ಡಾ. ವಾಸುದೇವ ಭಟ್ ಕೆ ಈ ಅಪರೂಪದ ಚಿಕಿತ್ಸೆಯ ಬಗ್ಗೆ ಮಾತನಾಡುತ್ತ “ಕ್ಯಾನ್ಸರ್ ಪೀಡಿತ ಮಕ್ಕಳಲ್ಲಿ ಇಮ್ಯುನೊಥೆರಪಿ ಮುಂದಿನ ಚಿಕಿತ್ಸಾ ಆಯ್ಕೆಯಾಗಿದ್ದು , ಇದು ಕಿಮೊಥೆರಪಿಯ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಮತ್ತು ಫಲಿತಾಂಶಗಳನ್ನು ಮತ್ತಷ್ಟು ಸುಧಾರಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದರು. ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಅರ್ಚನಾ ಎಂ.ವಿ. “ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಯಶಸ್ವಿಯಾಗಿ ಈ ತರಹದ ಇಮ್ಯುನೊಥೆರಪಿ ಕೋರ್ಸ್‌ಗೆ ಒಳಗಾದ ಮೊದಲ ಮಗು ಇದಾಗಿದ್ದು ಮತ್ತು ಸಹಯೋಗದ ತಂಡದ ಕೆಲಸದ ಮಹತ್ವವನ್ನು ಅವರು ಉಲ್ಲೇಖಿಸಿದರು” . ಚಿಕಿತ್ಸೆಯು ಮುಗಿದು ಈಗ 12 ತಿಂಗಳು ತುಂಬಿದೆ, ಮಗು ಆರೋಗ್ಯವಾಗಿದ್ದು, ಶಾಲೆಗೆ ಹೋಗಲು ಸಿದ್ಧವಾಗಿದ್ದಾಳೆ.
ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಈ ಜೀವ ಉಳಿಸುವ ಪ್ರಯತ್ನದಲ್ಲಿ ಮಕ್ಕಳ ಆಂಕೊಲಾಜಿ ಮತ್ತು ಸಂಬಂಧಿತ ಕ್ಯಾನ್ಸರ್ ವಿಶೇಷತೆಗಳ ವೈದ್ಯರು ಮತ್ತು ನರ್ಸಿಂಗ್ ಸಿಬ್ಬಂದಿಯ ಸಹಯೋಗದ ಪ್ರಯತ್ನಗಳನ್ನು ಶ್ಲಾಘಿಸಿದರು. “ಈ ಸಾಧನೆಯು ಕರಾವಳಿ ಕರ್ನಾಟಕದಲ್ಲಿ ಕ್ಯಾನ್ಸರ್ ಪೀಡಿತ ಕುಟುಂಬಗಳಿಗೆ ಹೊಸ ಭರವಸೆಯನ್ನು ತರುವುದಲ್ಲದೆ, ಮಕ್ಕಳ ಆಂಕೊಲಾಜಿಯಲ್ಲಿ ಪ್ರಗತಿಗೆ ದಾರಿದೀಪವಾಗಿಯೂ ಕಾರ್ಯನಿರ್ವಹಿಸುತ್ತದೆ” ಎಂದು ಅವರು ಹೇಳಿದರು.












