ಉಡುಪಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಅಹವಾಲು ಮೂಲಕ ನೀಡಿದ ಅರ್ಜಿಗಳನ್ನು ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೇ ಶೀಘ್ರದಲ್ಲಿಯೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.
ಅವರು ಶುಕ್ರವಾರ ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬ್ರಹ್ಮಾವರ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ಬ್ರಹ್ಮಾವರ ಇವರ ಸಹಯೋಗದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.
ಜನಸ್ಪಂದನ ಸಭೆಗಳು ಜನರಿಗೆ ಸಹಕಾರಿ ಯಾಗಬೇಕು. ಅಧಿಕಾರಿಗಳು ಸಮಸ್ಯೆ ಇತ್ಯರ್ಥಪಡಿಸಲು ಸೂಕ್ಷ್ಮ ರೀತಿಯಲ್ಲಿ ಸ್ಪಂದಿಸಬೇಕು. ರಸ್ತೆ ಸಮಸ್ಯೆ, ಸೇತುವೆ ನಿರ್ಮಾಣ ಸೇರಿದಂತೆ ಮತ್ತಿತರ ಹಣಕಾಸಿನ ಅವಶ್ಯವಿರುವ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದು ಅವರುಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಾಗ ಸರ್ಕಾರದ ಮಟ್ಟದಲ್ಲಿ ಅವುಗಳನ್ನು ಇತ್ಯರ್ಥ ಪಡಿಸಲಾಗುವುದು. ಉಳಿದ ಜನಸಮಾನ್ಯರ ದೈನಂದಿನ ಸಮಸ್ಯೆಗಳ ಅರ್ಜಿಗಳನ್ನು ಸ್ಥಳೀಯ ಹಂತದಲ್ಲಿ ಜನಸ್ಪಂದನ ಕಾರ್ಯಕ್ರಮದಲ್ಲಿ ಪರಿಹರಿಸಲಾಗುವುದು ಎಂದರು.
ಜನಸ್ಪಂದನ ಕಾರ್ಯಕ್ರಮಗಳು ನಡೆಯುವ ಕುರಿತು ಜನರಿಗೆ ಇನ್ನೂ ಹೆಚ್ಚಿನ ಪ್ರಚಾರ ನೀಡಬೇಕು. ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಎಸ್.ಎಲ್.ಆರ್.ಎಮ್ ವಾಹನಗಳ ಮೂಲಕ ಪ್ರಚಾರ ಕೈಗೊಳ್ಳಬೇಕು ಎಂದ ಅವರು, ಜನಸ್ಪಂದನ
ಕಾರ್ಯಕ್ರಮದಲ್ಲಿ ಸ್ವೀಕರಿಸಲಾದ ಎಲ್ಲಾ ಅರ್ಜಿಗಳನ್ನು ಐ.ಪಿ.ಜಿ.ಆರ್.ಎಸ್ ಪೋರ್ಟಲ್ ನಲ್ಲಿ ದಾಖಲಿಸಿ ಆಯಾ ಇಲಾಖೆಗಳಿಗೆ ವರ್ಗಾಯಿಸುವುದರೊಂದಿಗೆ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು ಜೊತೆಗೆ ಅರ್ಜಿಗಳಿಗೆ ನೀಡಲಾದ ಪರಿಹಾರಗಳನ್ನು ಸಹ ಸಾರ್ವಜನಿಕರು ಇದರಲ್ಲಿ ವೀಕ್ಷಿಸಬಹುದಾಗಿದೆ ಎಂದರು.
ಸರಕಾರವು ಪ್ರತೀ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾಡುವಂತೆ ತಿಳಿಸಿದ್ದು, ಜನರ ಬಳಿ ತೆರಳಿ ಅವರುಗಳ ಸ್ಥಳೀಯ ಸಮಸ್ಯೆಗಳನ್ನು ಅಧಿಕಾರಿಗಳ ನೇತೃತ್ವದಲ್ಲಿ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳುವುದು ಇದರ ಉದ್ದೇಶವಾಗಿದ್ದು, ಸಾರ್ವಜನಿಕರ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳಾದ ಖಾತೆ ಬದಲಾವಣೆ, ಹಕ್ಕುಪತ್ರ ವಿತರಣೆ, ಪ್ರಮಾಣ ಪತ್ರ ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಅಧಿಕಾರಿಗಳ ನೇತೃತ್ವದಲ್ಲಿ ತಕ್ಷಣವೇ ಸ್ಪಂದಿಸಬೇಕು ಎಂದರು.ಸಾರ್ವಜನಿಕರು ಡೆಂಗ್ಯೂ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಎಲ್ಲಿಯೂ ಕೂಡ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಡ್ರಂ, ಬ್ಯಾರೆಲ್ಗಳಲ್ಲಿ ಸಂಗ್ರಹಿಸಲಾದ ನೀರನ್ನು ಆಗಿಂದಾಗ್ಗೆ ಬದಲಾಯಿಸಬೇಕು.
ಸರ್ಕಾರವು ಪ್ರತೀ ಶುಕ್ರವಾರ ಒಣ ದಿನ ಆಚರಿಸುವಂತೆ ಸೂಚಿಸಿದ್ದು,ಈ ಅಭಿಯಾನದಲ್ಲಿ ಪ್ರತೀ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯ ಯಾವುದೇ ಮನೆಗಳ ಸುತ್ತಮುತ್ತ ನೀರು ನಿಂತಿದ್ದಲ್ಲಿ ಅವುಗಳನ್ನು ಚೆಲ್ಲಿ, ಸೊಳ್ಳೆಗಳ ಉತ್ಪತಿ ತಾಣವಾಗದಂತೆ ನೋಡಿಕೊಳ್ಳಬೇಕು. ಡೆಂಗ್ಯೂ
ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿ ಗಳೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಮಳೆ ಹೆಚ್ಚಾಗಿರುವ ಹಿನ್ನೆಲೆ, ಸಾರ್ವಜನಿಕರು ಶಿಥಿಲಾವಸ್ಥೆಯಲ್ಲಿರುವ ಮನೆಗಳಲ್ಲಿ ವಾಸ ಮಾಡಬಾರದು. ಪ್ರಾಣಹಾನಿಯಾಗದಂತೆ ಆದಷ್ಟು ಹೆಚ್ಚಿನ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದರು.
ಶಾಸಕ ಯಶ್ಪಾಲ್ ಎ ಸುವರ್ಣ ಮಾತನಾಡಿ, ಪ್ರತೀ ತಾಲೂಕು ಮಟ್ಟದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿ, ಖುದ್ದಾಗಿ ಪರಿಹಾರ ನೀಡುವ ಕಾರ್ಯಕ್ರಮ ಜನಸ್ಪಂದನ. ಸರಕಾರದ ಯೋಜನೆಗಳು ಹಾಗೂ ಸೌಲಭ್ಯಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಬೇಕು.ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಜನರ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಅವರುಗಳ ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಮುಂದಾಗಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಭಾರಿ ಗಾಳಿ-ಮಳೆಯಿಂದ ಬಹಳಷ್ಟು ನಷ್ಟ ಉಂಟಾಗಿದ್ದು, ಶೀಘ್ರವಾಗಿ ಸರ್ಕಾರ ಪರಿಹಾರ ನೀಡಬೇಕು ಎಂದ ಅವರು, ಬಸ್ಗಳ ಸಮಸ್ಯೆಯಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಓಡಾಡಲು ಹಾಗೂ ವಿದ್ಯಾರ್ಥಿಗಳು ಶಾಲಾ-
ಕಾಲೇಜಿಗೆ ತೆರಳಲು ತೊಂದರೆ ಉಂಟಾಗುತ್ತಿರುವ ಹಿನ್ನೆಲೆ, ಬಸ್ಗಳ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಜನರ ದೈನಂದಿನ ಕೆಲಸದಲ್ಲಿ ತೊಂದರೆಯಾದಾಗ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪರಿಹಾರವಾಗುವ ಸಮಸ್ಯೆಗಳನ್ನು ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಪರಿಹರಿಸಲಾಗುವುದು. ಕಳೆದ ಸಾಲಿನಲ್ಲಿ
ಸ್ವೀಕೃತವಾದ ಅರ್ಜಿಗಳಿಗೆ ಪರಿಹಾರ ಸಿಕ್ಕಾಗ ಮಾತ್ರ ಈ ಯೋಜನೆ ಅರ್ಥಪೂರ್ಣವಾಗಿರುತ್ತದೆ. ಜನರು ತಮ್ಮ ಅರ್ಜಿಗಳಿಗೆ ಕಚೇರಿಗೆ ಅಲೆಯುವಂತಾಗಬಾರದು. ಕಾನೂನಿನ ಚೌಕಟ್ಟಿನೊಳಗೆ ಅಧಿಕಾರಿಗಳು ಜನರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಈ ಯೋಜನೆ
ಇನ್ನಷ್ಟು ಸರಳೀಕೃತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ಬ್ರಹ್ಮಾವರ ವಲಯದ ಸರಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಸಹನಾ, ಸನಿತಾ, ಅಮೃತ ಅಡಿಗ ಹಾಗೂ ಧರಿತ್ರಿ ಕಾಮತ್ ಅವರುಗಳಿಗೆ ಲ್ಯಾಪ್ಟಾಪ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಎಸ್ಪಿ ಪರಮೇಶ್ವರ್ ಹೆಗಡೆ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಜಿಲ್ಲಾ ಪಂಚಾಯತ್
ಉಪಕಾರ್ಯದರ್ಶಿ ರಾಧಾಕೃಷ್ಣ ಅಡಿಗ, ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಎಸ್ ಹೆಗ್ಡೆ, ಬ್ರಹ್ಮಾವರ ತಾಲೂಕು ಪಂಚಾಯತ್ ಇ.ಓ ಇಬ್ರಾಹಿಂಪುರ, ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಬಿ.ಆರ್, ವಿವಿಧ ಜಿಲ್ಲಾ ಹಾಗೂ ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಸ್ ಸೌಲಭ್ಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶುಶ್ರೂಷಕಿಯನ್ನು ನೇಮಿಸುವ ಕುರಿತು, ವಿದ್ಯುತ್ ಸಂಪರ್ಕ ಕಲ್ಪಿಸುವ ಕುರಿತು, ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಕುರಿತು, ರಸ್ತೆ ದುರಸ್ತಿ, ಸರ್ಕಾರಿ ಸ್ಥಳ ಅತಿಕ್ರಮಣ, ಕಟ್ಟಡಗಳ ಸಕ್ರಮ, ಪ್ಲಾಟಿಂಗ್ ಕಾರ್ಯ ಪೂರ್ಣಗೊಳಿಸುವ ಬಗ್ಗೆ, ಖಾತೆ ಬದಲಾವಣೆ, 94 ಸಿಯಲ್ಲಿ ಹಕ್ಕುಪತ್ರ ನೀಡುವ ಕುರಿತು, ಪಹಣಿ ತಿದ್ದುಪಡಿ, ನೀರಿನ ಸೌಲಭ್ಯ, ಸೇರಿದಂತೆ ಸುಮಾರು 91 ಅಹವಾಲುಗಳು ಸಲ್ಲಿಕೆಯಾಗಿದ್ದವು.