ಕಿರಿಮಂಜೇಶ್ವರ: ಎಪ್ರಿಲ್ 15 ರಂದು ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಚಿಣ್ಣರ ಬೇಸಿಗೆ ಶಿಬಿರ ಅಪರಂಜಿ 2.0 ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗಣೇಶ್ ಮೊಗವೀರ ಅವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಕರಾವಳಿ ಭಾಗದಲ್ಲಿ ಮರೀಚಿಕೆಯಾಗಿ ರುವ ಆಂಗ್ಲ ಭಾಷಾ ಸಂವಹನ ಕೌಶಲ್ಯ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ನಮ್ಮ ಶಿಕ್ಷಣ ಸಂಸ್ಥೆಯ ಗುರಿಯಾಗಿದೆ. ಪ್ರತಿಯೊರ್ವ ಶಿಬಿರಾರ್ಥಿಯು ಇದರ ಸದುಪಯೋಗವನ್ನು ಪಡೆದುಕೊಂಡಾಗ ಈ ಕಾರ್ಯಕ್ರಮವು ಯಶಸ್ವಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಬೈಂದೂರು ವಲಯದ ಶಿಕ್ಷಣಾಧಿಕಾರಿ ಗಳಾದ ನಾಗೇಶ್ ನಾಯಕ್ ಅವರು ಶೈಕ್ಷಣಿಕ ಗುಣಮಟ್ಟ ಹಾಗೂ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಈ ಸಂಸ್ಥೆಯು ಮುಂಚೂಣಿಯಲ್ಲಿದೆ. ಮಗು ಶಾಲಾ ವ್ಯವಸ್ಥೆಯಲ್ಲಿದ್ದಾಗ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ. ಈ ಕಾರ್ಯಕ್ರಮದಲ್ಲಿ ಪಡೆದುಕೊಂಡ ಶಿಕ್ಷಣವನ್ನು ತಮ್ಮ ಸ್ನೇಹಿತರು ಹಾಗೂ ಪೋಷಕರೊಂ ದಿಗೆ ಹಂಚಿಕೊಂಡಾಗ ಶಿಬಿರವು ಸಾರ್ಥಕವಾಗಲು ಸಾಧ್ಯವೆಂದರು.
ಮುಖ್ಯ ಶಿಕ್ಷಕಿಯಾಗಿರುವ ದೀಪಿಕಾ ಆಚಾರ್ಯ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಕನಸುಗಳು ಪರಿಪೂರ್ಣಗೊಳ್ಳಲು ಅವಕಾಶಗಳು ಅಗತ್ಯ.ಇದಕ್ಕೆ ಸರಿಯಾದ ಮಾರ್ಗದರ್ಶವನ್ನು ನೀಡುವಲ್ಲಿ ನಮ್ಮ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಈ ಕಾರ್ಯಕ್ರ ಮವು ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರ ಸಹಕಾರ ಅಗತ್ಯ ವೆಂದರು.
ಡ್ರಾಮಾ ಜೂನಿಯರ್ಸ್ ಫೈನಲಿಸ್ಟ್ ಸಿಂಚನ ಕೋಟೇಶ್ವರ, ಡಾನ್ಸ್ ಕರ್ನಾಟಕ ಬೆಸ್ಟ್ ಡ್ಯಾನ್ಸರ್ ಜೂನಿಯರ್ ಸೀಸನ್ 1 ರ ಮಾನ್ವಿ ಸಾಲಿಗ್ರಾಮ, ಸರಿಗಮಪ ಲಿಟ್ಲ್ ಚಾಂಪ್ ಫೈನಲಿಸ್ಟ್ ಸಮೀಕ್ಷಾ ಸಾಲಿಗ್ರಾಮ ಅವರು ಗಾನ-ನಾಟ್ಯ ವೈಭವ ನಡೆಸಿಕೊಟ್ಟರು.ಹಾಗೆಯೇ ಭಾಸ್ಕರ್ ಕೊಗ್ಗ ಕಾಮತ್ ಅವರ ಸಾರಥ್ಯದಲ್ಲಿ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಉಪ್ಪಿನಕುದ್ರು ಇವರ ಬಳಗದಿಂದ ಗೊಂಬೆಯಾಟ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ನಡೆಯಿತು.
ಈ ಸಮಾರಂಭದಲ್ಲಿ ಬೋಧಕ /ಬೋಧಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿಯಾದ ಶ್ರೇಯಾ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.












