ಹೆಬ್ರಿ: ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ ಒಂದಕ್ಕೆ ಸೀಮಿತವಾಗಿರಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು ಕನ್ನಡ ರಾಜ್ಯೋತ್ಸವದ ಸುವರ್ಣ ಕರ್ನಾಟಕದ ಅಂಗವಾಗಿ ವರ್ಷವಿಡಿ ಶಾಲಾ ಕಾಲೇಜುಗಳಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮ ಮಾಡುವುದರ ಮೂಲಕ ಕನ್ನಡದ ಕಂಪನ್ನು ನಾಡಿನೆಲ್ಲೆಡೆ ಪಸರಿಸುತ್ತಿರುವ ಏಕೈಕ ಸಂಸ್ಥೆ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರ ಎಂದು ಹೆಬ್ರಿ ತಹಸೀಲ್ದಾರ್ ಪ್ರಸಾದ್ ಎಸ್.ಎ. ಹೇಳಿದರು.
ಅವರು ಆ. 27ರಂದು ಚಾರ ಜವಾಹರ ನವೋದಯ ವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸುವರ್ಣ ಕರ್ನಾಟಕದ ಅಂಗವಾಗಿ ಹೆಬ್ರಿಯ ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ನೇತೃತ್ವದಲ್ಲಿ ವಷ೯ವಿಡಿ ನಡೆಯುತ್ತಿರುವ ಕನ್ನಡ ಗೀತೆಗಳ ಗಾಯನ ಗಾನಯಾನ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಕನ್ನಡ ಗೀತಾ ಗಾಯನದ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂಗೀತ ಮನಸ್ಸಿನ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಶಿಕ್ಷಣದೊಂದಿಗೆ ಯಾವುದೇ ಚಟುವಟಿಕೆಯಲ್ಲಿ ನಮ್ಮನ್ನು ತೊಡಗಿಸಿ ಕೊಂಡಾಗ ನಮ್ಮ ಬದುಕು ಸುಂದರವಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ನವೋದಯದ ಉಪ ಪ್ರಾಂಶುಪಾಲ ವಿ.ಕೆ. ಮನೋಹರ್ ವಹಿಸಿ ಮಾತನಾಡಿ ಚಾಣಕ್ಯ ಸಂಸ್ಥೆ ವಿವಿಧ ಚಟುವಟಿಕೆಗಳ ತರಬೇತಿಯ ಜೊತೆ ಶಾಲಾ ಕಾಲೇಜಿಗಳಿಗೆ ತೆರಳಿ ಕನ್ನಡದ ಕಂಪನ್ನು ಪಸರಿಸಿ ಮಕ್ಕಳಲ್ಲಿ ಕನ್ನಡದ ಜಾಗೃತಿಯನ್ನು ಮೂಡಿಸುತ್ತಿರುವುದು ಶ್ಲಾಘನೀಯ ಎಂದರು. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ. ಕರುಣಾಕಶೆಟ್ಟಿ ಮಾತನಾಡಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಳೆದ ಒಂದು ವರ್ಷದಿಂದ ಶಾಲೆ ಕಾಲೇಜುಗಳಲ್ಲಿ ಉಚಿತವಾಗಿ ಕನ್ನಡದ ಗೀತ ಗಾಯನ ನಡೆಸುತ್ತಿರುವ ಚಾಣಕ್ಯ ಸಂಸ್ಥೆ ರಾಜ್ಯಕ್ಕೆ ಮಾದರಿ ಎಂದರು.
ಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಇದರ ನಿಕಟ ಪೂರ್ವ ಅಧ್ಯಕ್ಷ ರಘುರಾಮ ಶೆಟ್ಟಿ ಕನ್ನಡ ಗೀತಾ ಗಾನಯಾನದ ಕುರಿತ ಸ್ವರಚಿತ ಕವನ ವಾಚನ ಮಾಡಿದರು. ಸಮಾರಂಭದಲ್ಲಿ ನವೋದಯ ವಿದ್ಯಾಲಯದ ಸಂಗೀತ ಗುರು ಮಹದೇವ್ ಮೊದಲಾದವರು ಉಪಸ್ಥಿತರಿದ್ದರು. ಚಾಣಕ್ಯ ಮೆಲೋಡಿಸ್ ನ ನಿತ್ಯಾನಂದ ಭಟ್, ಡಾ.ರವಿಪ್ರಸಾದ್ ಹೆಗ್ಡೆ, ಸುಬ್ರಮಣ್ಯ ಕಾಂಗಿನಾಯ, ಪ್ರಸನ್ನ ಮುನಿಯಾಲು, ವೇದ ಶಿವಪುರ, ನವೋದಯದ ಚಿತ್ರಕಲಾ ಶಿಕ್ಷಕ ದಿನೇಶ್, ಐಶ್ವರ್ಯ ಮೊದಲಾದವರು ಕನ್ನಡ ಗೀತಾಗಾಯನ ನಡೆಸಿಕೊಟ್ಟರು.
ಚಾಣಕ್ಯ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಚಾಣಕ್ಯ ಟುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಂದಿಸಿದರು.