ಮಥುರಾ: ಮೂವರು ಕಿಡಿಗೇಡಿಗಳು 13 ವರ್ಷದ ಬಾಲಕಿಯನ್ನು ಅಪಹರಿಸಿ, ಚಲಿಸುವ ಕಾರಿನಲ್ಲೇ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಕಾರಿನಿಂದ ಹೊರಗೆಸೆದಿದ್ದಾರೆ ಎಂದು ಆರೋಪಿಸಲಾಗಿದೆ ಈ ಬಗ್ಗೆ ಬಾಲಕಿ ತಂದೆ ನೀಡಿರುವ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಪ್ರದೇಶದ ಮಥುರಾದಲ್ಲಿ ಘಟನೆ ನಡೆದಿದ್ದು, ಅಸ್ವಸ್ಥಗೊಂಡಿದ್ದ ಆಕೆಯನ್ನು ವೈದ್ಯರ ಬಳಿ ಪೋಷಕರು ಕರೆದೊಯ್ದಾಗ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಇದೀಗ ಆಕೆಯ ಪೋಷಕರು ಛಾಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಾಂತರ ಪೊಲೀಸ್ ಅಧೀಕ್ಷಕ ತ್ರಿಗುಣ್ ಬೈಸೆನ್ ತಿಳಿಸಿದ್ದಾರೆ.
ಬಾಲಕಿಯು ಸೆ.19 ರಂದು ಉಪಾಹಾರಕ್ಕಾಗಿ ಸಾಮಾನು ತರಲು ಹತ್ತಿರದ ಅಂಗಡಿಗೆ ತೆರಳಿದ್ದಾಗ ಅಲ್ಲಿದ್ದ ನೀರಜ್ ಎಂಬಾತ ಬಾಲಕಿಗೆ ನಿದ್ರೆ ಬರುವ ಪದಾರ್ಥ ಬೆರೆಸಿದ್ದ ನೀರನ್ನು ನೀಡಿದ್ದಾನೆ. ಅದನ್ನು ಕುಡಿದ ಬಳಿಕ ಆಕೆಗೆ ತಲೆ ತಿರುಗಿದಂತಾಗಿದೆ. ಆ ವೇಳೆ ನೀರಜ್, ಆತನ ಸ್ನೇಹಿತ ಶೈಲೇಂದ್ರ ಹಾಗೂ ಮತ್ತೊಬ್ಬ ಸಹಚರ ಸೇರಿ ಕಾರಿನಲ್ಲಿ ಆಕೆಯನ್ನು ಕೊಂಡೊಯ್ದಿದ್ದಾರೆ. ಬಳಿಕ ಚಲಿಸುವ ಕಾರಿನಲ್ಲೇ ಅರೆಪ್ರಜ್ಞಾವಸ್ಥೆಯಲ್ಲಿದ್ದ ಆಕೆಯ ಮೇಲೆ ಅತ್ಯಾಚಾರವೆಸಗಿ ಬರ್ಸಾನ ರಸ್ತೆಯ ಮೇಲ್ಸೇತುವೆ ಅಡಿ ಬಿಸಾಡಿ ಪರಾರಿಯಾಗಿದ್ದಾರೆ. ಪ್ರಜ್ಞೆ ಬಂದ ಬಳಿಕ ಆಕೆ ಮನೆಗೆ ತಲುಪಿ ನಡೆದ ಘಟನೆ ವಿವರಿಸಿದ್ದಾಳೆ ಎಂದು ಆಕೆಯ ತಂದೆ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.