ಕೋಟ: ಕರುವಿನ ಬಾಲ ಕತ್ತರಿಸಿದ ಬಗ್ಗೆ ಸುಳ್ಳು ಸುದ್ದಿ ಪೋಸ್ಟ್: ಹಲವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲು.

ಕೋಟ: ಕರುವಿನ ಬಾಲವನ್ನು ಮತಾಂಧ ವ್ಯಕ್ತಿ ತುಂಡರಿಸಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ ಹಲವರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

“ಬ್ರಹ್ಮಾವರದ ಗುಂಡ್ಮಿ ಗ್ರಾಮದ ಭಗವತಿ ರಸ್ತೆಯಲ್ಲಿರುವ ನಾಗೇಶ ಮಯ್ಯ ಎಂಬವರ ಮನೆಯ ದನದ ಕರುವಿನ ಬಾಲದ ತುದಿಯನ್ನು ಮತಾಂಧರು ಕತ್ತರಿದ್ದಾರೆ” ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಈ ಬಗ್ಗೆ ಕೋಟ ಎಸ್ಸೈ ಮನೆಗೆ ತೆರಳಿ ವಿಚಾರಿಸಿದರು.

ಅದರಂತೆ ಜ.28ರಂದು ಮಧ್ಯಾಹ್ನ 2ಗಂಟೆಗೆ ನಾಗೇಶ ಮಯ್ಯ ಹಾಗೂ ಅವರ ಹೆಂಡತಿ ಅಹಲ್ಯ ಮನೆಯಲ್ಲಿರುವಾಗ 60 ವರ್ಷ ಪ್ರಾಯದ ಅಪರಿಚಿತ ವ್ಯಕ್ತಿ ಸಹಾಯ ಮಾಡುವಂತೆ ಅವರ ಮನೆಗೆ ಬಂದಿದ್ದು ಅವರು ಹಣ ಕೊಡದಿದ್ದಾಗ ಆ ವ್ಯಕ್ತಿ ಅಲ್ಲಿಂದ ಹೋಗಿದ್ದನು. ಅದೇ ದಿನ ಸಂಜೆ 4 ಗಂಟೆಗೆ ನಾಗೇಶ ಮಯ್ಯ ದನದ ಹಾಲು ಕರೆಯಲು ಕೊಟ್ಟಿಗೆಗೆ ಹೋದಾಗ ದನ ನಿಂತುಕೊಂಡಿದ್ದು ಮಲಗಿದ್ದ ಕರುವಿನ ಬಾಲದ ಮೇಲೆ ದನದ ಕಾಲು ಇತ್ತು.ಇದೇ ವೇಳೆ ಕರು ಎದ್ದಾಗ ಅದರ ಬಾಲ ತುಂಡಾಗಿ ಬಿದ್ದಿತ್ತೆನ್ನಲಾಗಿದೆ. ಈ ವಿಷಯವನ್ನು ಅದೇ ದಿನ ರಾತ್ರಿ ನಾಗೇಶ ಮಯ್ಯ ಅವರ ಮಗ ಅನಿಲ ಮಯ್ಯಗೆ ತಿಳಿದರು. ಆತ ಇದರ ವಾಸ್ತವವನ್ನು ಸರಿಯಾಗಿ ಅರಿಯದೇ ಇನ್ನೂ ಕೆಲವರು ಸೇರಿ ಈ ವಿಷಯವನ್ನು ತಿರುಚಿ “ಯಾರೋ ಮತಾಂಧ ಸೇಲ್ಸ್‌ ಮ್ಯಾನ್ ಮನೆಗೆ ಬಂದು ದನದ ಕರುವಿನ ಬಾಲವನ್ನು ಕತ್ತರಿಸಿರುವುದಾಗಿ” ಸುದ್ದಿಯನ್ನು ಹಬ್ಬಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಕರುವಿನ ತುಂಡಾದ ಬಾಲದ ಫೋಟೋವನ್ನು ಹಾಕಿದ್ದರು.

ವಾಸ್ತವಿಕ ಸಂಗತಿಗಳನ್ನು ತಿರುಚಿ ಸಾಮಾಜಿಕ ಸಾಮರಸ್ಯವನ್ನು ಹಾಳು ಗೆಡುವುದಕ್ಕೆ ಮತ್ತು ಆತಂಕದ ವಾತಾವರಣ ನಿರ್ಮಾಣ ಆಗುವಂತೆ ಸುಳ್ಳು ಸುದ್ದಿ ಸೃಷ್ಟಿಸಿ, ಸಾರ್ವಜನಿಕ ಶಾಂತಿ ಸುವ್ಯವಸ್ಥೆಗೆ ಭಂಗವನ್ನುಂಟು ಮಾಡಿರುವ ಅನಿಲ ಮಯ್ಯ ಮತ್ತು ಇತರರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.