ಉಡುಪಿ: ಕೋಲ್ಕತ್ತಾದಲ್ಲಿ ನಡೆದ ವೈದ್ಯಕೀಯ ವಿದ್ಯಾರ್ಥಿನಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ವಿರೋಧಿಸಿ ರಾಷ್ಟ್ರೀಯ ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆಯ ಕರೆಯಂತೆ ಉಡುಪಿ ಜಿಲ್ಲೆಯಾದ್ಯಂತ ವೈದ್ಯರು ಇಂದು ಬೆಳಿಗ್ಗೆ 6ಗಂಟೆಯಿಂದ ತುರ್ತು ಚಿಕಿತ್ಸೆ ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳನ್ನು ಮುಚ್ಚಿ ಮುಷ್ಕರ ನಡೆಸಿದರು.
ಕೊಲ್ಕತ್ತಾ ಘಟನೆಯನ್ನು ಖಂಡಿಸಿ ಐಎಂಎ ಉಡುಪಿ ಕರಾವಳಿ ಶಾಖೆಯ ವ್ಯಾಪ್ತಿಯ ಸುಮಾರು 260 ಮಂದಿ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆ.17ರ ಬೆಳಗ್ಗೆ 6ಗಂಟೆಯಿಂದ 18ರ ರವಿವಾರ ಬೆಳಗ್ಗೆ 6ಗಂಟೆಯವರೆಗೆ ಒಟ್ಟು 24 ಗಂಟೆಗಳ ಕಾಲ ತುರ್ತು ಚಿಕಿತ್ಸೆಯನ್ನು ಹೊರತುಪಡಿಸಿ ತಮ್ಮ ಕ್ಲಿನಿಕ್ ಹಾಗೂ ಆಸ್ಪತ್ರೆಗಳ ಇತರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಐಎಂಎ ಅಧೀನದಲ್ಲಿ ಒಟ್ಟು 550ಕ್ಕೂ ಅಧಿಕ ವೈದ್ಯರಿದ್ದು, ಅವರೆಲ್ಲ ಮುಷ್ಕರ ನಡೆಸುತ್ತಿದ್ದಾರೆ. ಅದೇ ರೀತಿ ಈ ಮುಷ್ಕರಕ್ಕೆ ಭಾರತೀಯ ದಂತ ವೈದ್ಯ ಸಂಘ ಉಡುಪಿ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಇದರ 125 ಸದಸ್ಯರು ಕೂಡ ಇಂದು ಬೆಳಗ್ಗೆಯಿಂದ ತಮ್ಮ ದಂತ ವೈದ್ಯಕೀಯ ಚಿಕಿತ್ಸಾಲಯಗಳನ್ನು ಮುಚ್ಚಿದ್ದಾರೆ. ನಮ್ಮ ಸಂಘದ ಎಲ್ಲ ಸದಸ್ಯರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ತುರ್ತು ಚಿಕಿತ್ಸೆ ಹೊರತುಪಡಿಸಿ ಹೊರರೋಗ ವಿಭಾಗಗಳಲ್ಲಿ ಯಾವುದೇ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.












