ಬೆಂಗಳೂರು: ಕೇಕ್ ತಿಂದು ಫುಡ್ ಪಾಯ್ಸನ್ ನಿಂದ 5 ವರ್ಷದ ಧೀರಜ್ ಸಾವನ್ನಪ್ಪಿದ್ದ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ. ತಂದೆ ಬಾಲರಾಜ್ ಹಾಗೂ ತಾಯಿ ನಾಗಲಕ್ಷ್ಮೀ ಸ್ಥಿತಿ ಗಂಭೀರವಾಗಿದೆ.
ಅಸ್ವಸ್ಥರಾದ ಬಾಲರಾಜ್ ಅವರು ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದು, ಅ.06 ರಂದು ಸಂಜೆ ಕೇಕ್ ಆರ್ಡರ್ ಬಂದಿತ್ತು. ಬೇಕರಿಯಿಂದ ಕೇಕ್ ತೆಗೆದುಕೊಂಡು ಹೋಗುವಷ್ಟರಲ್ಲಿ ಆರ್ಡರ್ ಕ್ಯಾನ್ಸಲ್ ಆಗಿದೆ. ಈ ಹಿನ್ನಲೆ ಬಾಲರಾಜ್ ಮನೆಗೆ ಕೇಕ್ ತೆಗೆದುಕೊಂಡು ಹೋಗಿದ್ದಾನೆ. ಅದರಂತೆ ಇಡೀ ಕುಟುಂಬ ಅದನ್ನು ಸೇವಿಸಿದ್ದರು.
ಕೇಕ್ ತಿಂದ ಬಳಿಕ ಮಗು, ಪೋಷಕರು ಅಸ್ವಸ್ಥರಾಗಿದ್ದು, ಕೂಡಲೇ ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಘಟನೆ ಬಗ್ಗೆ ವಿವರ ನೀಡಬೇಕಾದ ತಂದೆ-ತಾಯಿ ಕೂಡ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೀಗಾಗಿ ಪೊಲೀಸರಿಗೆ ದೂರು ಕೊಡಲು ಅಥವಾ ಘಟನೆ ಹೇಗೆ ನಡೆದಿದೆ ಎಂಬ ಬಗ್ಗೆ ಹೇಳಲು ಯಾರು ಇಲ್ಲ. ಇಬ್ಬರಿಗೂ ಪ್ರಜ್ಞೆ ಬಂದ ಬಳಿಕ ಘಟನೆ ಬೆಳಕಿಗೆ ಬರುವ ಸಾಧ್ಯತೆಯಿದೆ.
ಈ ಘಟನೆ ಕುರಿತು ಸ್ಪಷ್ಟನೆ ನೀಡಿದ ಕಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಆಂಜಿನಪ್ಪ, ‘ಇದು ಫುಡ್ ಪಾಯ್ಸನ್ನಿಂದ ಆಗಿದ್ದು, ಆಸ್ಪತ್ರೆಗೆ ಬರುವ ಮೊದಲೇ, ಅಂದರೆ ಆಹಾರ ಸೇವಿಸಿದ ಬಳಿಕ ಸಡನ್ ಆಗಿ 5 ವರ್ಷದ ಮಗು ಮೃತಪಟ್ಟಿದೆ. ಈ ಕುರಿತು ಅಲ್ಟ್ರಾ ಸೌಂಡ್ ಸ್ಕ್ಯಾನ್ ಮಾಡಲಾಗಿದೆ. ಮಗುವಿನ ಸಾವಿಗೆ ನಿಖರ ಕಾರಣ ವರದಿಯಲ್ಲಿ ತಿಳಿಯಬೇಕಿದೆ. ಯಾವ ಕಾರಣ ಎಂದು ರಿಪೋರ್ಟ್ ನೋಡಿದ ಬಳಿಕ ಹೇಳುತ್ತೇವೆ. ಸದ್ಯ ಇದು ಪುಡ್ ಪಾಯ್ಸಿನ್ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿದಿದೆ. ಇನ್ನು ಮೃತ ಮಗುವಿನ ತಂದೆ-ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಬಾಲರಾಜ್ ಮತ್ತು ನಾಗಲಕ್ಷ್ಮೀ ದಂಪತಿಗೆ ಒಂದು ಗಂಡು ಹಾಗೂ ಒಂದು ಹೆಣ್ಣು ಇಬ್ಬರು ಮಕ್ಕಳಿದ್ದಾರೆ. ಮನೆಯಲ್ಲಿ ಒಟ್ಟು ನಾಲ್ಕು ಜನ ವಾಸವಿದ್ದರು. ಅಜ್ಜಿ ಮನೆಗೆ ಹೆಣ್ಣು ಮಗುವನ್ನ ಕಳುಹಿಸಲಾಗಿತ್ತು. ನಿನ್ನೆ ರಾತ್ರಿ ಮೂವರು ಕೂಡ ಊಟ ಮಾಡಿ, ಬಾಲರಾಜ್ ತಂದಿದ್ದ ಕೇಕ್ ಸೇವಿಸಿದ್ದರು. ಬೆಳಗಾಗುವಷ್ಟರಲ್ಲಿ ಈ ದುರ್ಘಟನೆ ನಡೆದಿದೆ. ಸದ್ಯ ಮೆಡಿಕಲ್ ರಿಪೋರ್ಟ್ಗಾಗಿ ಪೊಲೀಸರು ಕಾಯುತ್ತಿದ್ದಾರೆ.












