ಉಡುಪಿ: ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಕೆಮ್ಮಣ್ಣು ಇದರ ನೇತೃತ್ವದಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಗಾಂಧಿ ಜಯಂತಿಯ ಪ್ರಯುಕ್ತ ‘ಸ್ವಚ್ಛತಾ ಅಭಿಯಾನ ಕಾರ್ಯಕ್ರಮ’ವನ್ನು ಕೆಮ್ಮಣ್ಣು ಶಾಲೆಯಲ್ಲಿ ಬುಧವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಥ್ಲೆಟಿಕ್ ಕೋಚ್ ಶಾಲಿನಿ ರಾಜೇಶ್ ಶೆಟ್ಟಿ ಅವರು, ಹಿಂದೆ ಸರಕಾರಿ ಶಾಲೆಗಳಲ್ಲಿ ಮಕ್ಕಳೇ ತರಗತಿಗಳನ್ನು ಗುಡಿಸಿ ಸ್ವಚ್ಛ ಮಾಡುತ್ತಿದ್ದರು. ಶಾಲಾ ಆವರಣದಲ್ಲಿರುವ ಕಸಗಳನ್ನು ತೆಗೆದು ಸ್ವಚ್ಛತೆ ಕಾಪಾಡುತ್ತಿದ್ದರು. ಇದರಿಂದ ಎಳವೆಯಲ್ಲಿಯೇ ಮಕ್ಕಳಲ್ಲಿ ಸ್ವಚ್ಛತೆಯ ಜಾಗೃತಿ ಮೂಡುತ್ತಿತ್ತು. ಈ ಪರಿಪಾಠವನ್ನು ಇಂದಿನ ಮಕ್ಕಳೂ ರೂಢಿಸಿಕೊಳ್ಳಬೇಕು. ಆಗ ಮಾತ್ರ ಸ್ವಚ್ಛ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ಕ್ರೀಡೆಯಲ್ಲಿ ಸಾಧನೆ ಮಾಡಲು ಬಯಸುವ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾ ತರಬೇತಿಯನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್ ನ ಸ್ಥಾಪಕ ಅಧ್ಯಕ್ಷ ಗಣೇಶ್ ಪ್ರಸಾದ್ ನಾಯಕ್, ಅಂತರರಾಷ್ಟ್ರೀಯ ಜಾನಪದ ಕಲಾವಿದ ಡಾ. ಸಚಿನ್ ಸಾಲಿನ್ ಅವರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಸಿಡಿಸಿ ಉಪಾಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತೋನ್ಸೆ-ಕೆಮ್ಮಣ್ಣು ಗ್ರಾಪಂ ಕಾರ್ಯದರ್ಶಿ ದಿನಕರ್ ಬೆಂಗ್ರೆ, ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ, ಪ್ರೌಢಶಾಲಾ ವಿಭಾಗದ ಮುಖ್ಯಸ್ಥೆ ವಂದನಾ, ಕಾರ್ಯಕ್ರಮದ ಸಂಯೋಜಕ ಉದಯ ಕಂಡಾಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಾರನಾಥ್ ಪೂಜಾರಿ ಹಾಗೂ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಂದಕಿಶೋರ್ ಕೆಮ್ಮಣ್ಣು ಸ್ವಾಗತಿಸಿದರು. ಕನ್ನಡ ಅಧ್ಯಾಪಕಿ ಶಾಲಿನಿ ಕೆ.ಎನ್. ಕಾರ್ಯಕ್ರಮ ನಿರೂಪಿಸಿದರು. ಆಂಗ್ಲಭಾಷಾ ಅಧ್ಯಾಪಕಿ ಗ್ರೇಸಿ ಬಾಂಜಿ ವಂದಿಸಿದರು.
ಬಳಿಕ ಶಾಲಾ ವಠಾರದಲ್ಲಿ ಬೆಳೆದ ಗಿಡಗಂಟಿಗಳನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಹಳೆ ವಿದ್ಯಾರ್ಥಿಗಳು ಭಾಗವಹಿಸಿದರು.