ಕಾಪು: ಇಲ್ಲೊಂದು ಯುವಕರ ತಂಡ ಅನಾಥಾಶ್ರಮಕ್ಕೆ ನೆರವಾಗುವುದಕ್ಕಾಗಿಯೇ ಅಷ್ಟಮಿ ವೇಳೆ ವೇಷ ಧರಿಸಿ ಊರೂರು ಸುತ್ತಿ ಹಣ ಸಂಗ್ರಹಿಸಿದೆ. ವಿದೂಷಕರ ವೇಷ ಧರಿಸಿದ ಕಾಪುವಿನ ಸಚಿನ್ ಶೆಟ್ಟಿ ನೇತೃತ್ವದ ತಂಡ ಸಂಗ್ರಹಿಸಿದ 14.33 ಲ.ರೂ.ಯನ್ನು ಕಾರ್ಕಳ ತಾಲೂಕಿನ ಬೈಲೂರು ಕೌಡೂರಿನಲ್ಲಿರುವ ಹೊಸ ಬೆಳಕು ಅನಾಥಾಶ್ರಮದ ಮುಖ್ಯಸ್ಥೆ ತನುಲಾ ತರುಣ್ ಅವರಿಗೆ ಬುಧವಾರ ಹಸ್ತಾಂತರಿಸಿದರು.
ತಂಡದ ಸಚಿನ್, ಚೇತನ್, ನಿತೇಶ್, ಸುದೀಪ್, ಅಭಿಷೇಕ್ ಅವರು ತಮ್ಮ ಸಂಗಡಿಗರ ಜತೆ ವೇಷ ಧರಿಸಿ ಉಡುಪಿ ಮತ್ತು ಮಂಗಳೂರಿನಲ್ಲಿ ತಿರುಗಾಡಿ ದೇಣಿಗೆ ಸಂಗ್ರಹಿಸಿದ್ದಾರೆ.
ಅನಾಥಾಶ್ರಮದ ಕ್ಯುಆರ್ ಕೋಡ್:
ಈ ತಂಡವು ತಿರುಗಾಟದ ವೇಳೆ ಹೊಸ ಬೆಳಕು ಆಶ್ರಮದ್ದೇ ಕ್ಯುಆರ್ ಕೋಡ್ ಅನ್ನು ಬಳಸಿದ್ದು ವಿಶೇಷವಾಗಿತ್ತು. ವೇಷಕ್ಕೆ ಬೇಕಾದ ಖರ್ಚನ್ನು ತಂಡದ ಪ್ರೋತ್ಸಾಹಕರು ಭರಿಸಿದ್ದು, ನಗದು ರೂಪದಲ್ಲಿ ಸಂಗ್ರಹವಾದ ಹಣವನ್ನು ಕೂಡ ಆಶ್ರಮಕ್ಕೆ ನೀಡಿದ್ದಾರೆ.
ಹನ್ನೊಂದು ವರ್ಷದಿಂದ ಹೊಸ ಬೆಳಕು ಆಶ್ರಮವನ್ನು ಮುನ್ನಡೆಸುತ್ತಿದ್ದೇವೆ. ಕುಟುಂಬ ವರ್ಗದಿಂದ ದೂರವಾಗಿರುವ ಸುಮಾರು 180 ಮಂದಿಗೆ ಇಲ್ಲಿ ಸೇವೆ ನೀಡುತ್ತಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಸಚಿನ್ ಮತ್ತು ಬಳಗದವರು ಇಲ್ಲಿಗೆ ಬಂದು ಆಶ್ರಮ ಮತ್ತು ಆಶ್ರಮವಾಸಿಗಳ ಚಟುವಟಿಕೆಗಳನ್ನು ನೋಡಿ, ಸಂಕಷ್ಟವನ್ನು ಗಮನಿಸಿ ವೇಷ ಹಾಕಿ ತಮ್ಮ ದೇಹವನ್ನು ದಂಡಿಸಿ ಹಣ ಸಂಗ್ರಹಿಸಿ ನೆರವಾಗಿದ್ದಾರೆ.
–ತನುಲಾ ತರುಣ್, ಹೊಸ ಬೆಳಕು ಆಶ್ರಮದ ಮುಖ್ಯಸ್ಥೆ