ಬೆಂಗಳೂರು: 2019ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದ್ದು, ಪೈಲ್ವಾನ್ ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ಸುದೀಪ್ ಅವರು ಅತ್ಯುತ್ತಮ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ, ಇದೀಗ ಸುದೀಪ್ ತಮಗೆ ಪ್ರಶಸ್ತಿ ಬೇಡವೆಂದು ಹೇಳಿದ್ದಾರೆ.
ಕಿಚ್ಚ ಸುದೀಪ್ ಅವರು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಪ್ರಶಸ್ತಿಯನ್ನು ನಿರಾಕರಿಸುತ್ತಿರುವುದಕ್ಕೆ ರಾಜ್ಯ ಸರ್ಕಾರಕ್ಕೆ ಮತ್ತು ತಮ್ಮನ್ನು ಆಯ್ಕೆ ತೀರ್ಪುಗಾರರಿಗೆ ಕ್ಷಮೆ ಕೋರಿದ್ದಾರೆ.
‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಧನ್ಯವಾದಗಳು. ಆದರೆ, ನಾನು ಹಲವಾರು ವರ್ಷಗಳಿಂದ ಯಾವುದೇ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲ. ನನ್ನ ವೈಯಕ್ತಿಕ ಕಾರಣಗಳಿಂದಾಗಿ ನಾನು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನನ್ನನ್ನು ಹೊರತುಪಡಿಸಿ ಅನೇಕ ಅರ್ಹ ನಟರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಮತ್ತು ನನಗಿಂತ ಹೆಚ್ಚಾಗಿ ಅವರಿಗೇ ಈ ಪ್ರಶಸ್ತಿ ಸಿಗಬೇಕು. ಅವರಲ್ಲಿ ಒಬ್ಬರು ಇದನ್ನು ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷ ನೀಡುತ್ತದೆ’ ಎಂದಿದ್ದಾರೆ.
ಮುಂದುವರಿದು, ಜನರನ್ನು ರಂಜಿಸುವ ನನ್ನ ಕೆಲಸ ಯಾವಾಗಲೂ ಮುಂದುವರಿಯುತ್ತದೆ ಮತ್ತು ನಾನು ಯಾವುದೇ ಪ್ರಶಸ್ತಿಗಳ ನಿರೀಕ್ಷೆಯನ್ನು ಇಟ್ಟುಕೊಂಡಿಲ್ಲ. ತೀರ್ಪುಗಾರರು ನನ್ನನ್ನು ಆಯ್ಕೆ ಮಾಡಿರುವುದು ನಾನು ಮತ್ತಷ್ಟು ಉತ್ತಮವಾಗಿ ಕೆಲಸ ಮಾಡಲು ನನಗೆ ಉತ್ತೇಜನ ನೀಡುತ್ತದೆ ಎಂದು ತಿಳಿಸಿದ್ದಾರೆ.ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ನನ್ನ ಈ ನಿರ್ಧಾರದಿಂದ ಯಾವುದೇ ನಿರಾಶೆ ಉಂಟಾದರೆ, ಅದಕ್ಕಾಗಿ ನಾನು ತೀರ್ಪುಗಾರರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆ ಮಾಡಿದ ಹಾದಿಯಲ್ಲಿ ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ. ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಮತ್ತೊಮ್ಮೆ ತೀರ್ಪುಗಾರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಅವರ ಹೆಸರಿನಲ್ಲಿ ಸರ್ಕಾರ ನೀಡುತ್ತಿತ್ತು. ‘ತ್ರಯಂಬಕಂ’ ಚಿತ್ರದಲ್ಲಿನ ನಟನೆಗಾಗಿ ನಟಿ ಅನುಪಮಾ ಗೌಡ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಲಭಿಸಿದೆ. ಹಿರಿಯ ನಿರ್ದೇಶಕ ಪಿ. ಶೇಷಾದ್ರಿ ಅವರ ‘ಮೋಹನದಾಸ’ ಮೊದಲ ಅತ್ಯುತ್ತಮ ಚಿತ್ರವಾಗಿದ್ದು, ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೆಲ್, ಅಘ್ಯಂ ಕ್ರಮವಾಗಿ ಎರಡನೇ ಹಾಗೂ ಮೂರನೇ ಅತ್ಯುತ್ತಮ ಚಿತ್ರವಾಗಿವೆ.