ಕುಡ್ಲದಗಿಪ್ಪ ಕುಂದಾಪ್ರದರ್ ವಾಟ್ಸಪ್ ಬಳಗದ ವತಿಯಿಂದ ದಿನಾಂಕ: 11/08/2024 ನೇ ಆದಿತ್ಯವಾರದಂದು ಮಂಗಳೂರಿನ ಬಂಟ್ಸ್ ಹಾಸ್ಟೆಲ್ ರಾಮಕೃಷ್ಣ ಕಾಲೇಜಿನ ವಠಾರದಲ್ಲಿ ವಿಶ್ವ ಕುಂದಾಪುರ ಕನ್ನಡ ದಿನಾಚರಣೆಯು ಅದ್ಧೂರಿಯಾಗಿ ನಡೆಯಿತು. ಕಾರ‍್ಯಕ್ರಮವು ಬೆಳಿಗ್ಗೆ ಗ್ರಾಮೀಣ ಕ್ರೀಡಾ ಚಟುವಟಿಕೆಗಳೊಂದಿಗೆ ಪ್ರಾರಂಭವಾಯಿತು.
ರಾಮಕೃಷ್ಣ ಕಾಲೇಜಿನ ಸಂಚಾಲಕರಾದ ಡಾ.ಸಂಜೀವ ರೈ ಇವರು ಬಲೂನು ಹಾರಿಸುವ ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಿದರು. ನಿಂಬೆ ಹಣ್ಣಿನ ಓಟ, ಮೂರು ಕಾಲಿನ ಓಟ, ಗೋಣಿಚೀಲದ ಓಟ, ಗೂಟ ಸುತ್ತಿ ಓಡುವುದು, ಹಗ್ಗಜಗ್ಗಾಟದ ಮುಂತಾದ ಕ್ರೀಡಾ ಚಟುವಟಿಕೆಗಳ ಜೊತೆಗೆ ಮಡಲು ನೇಯುವ ಸ್ಪರ್ಧೆಗಳು ನಡೆದವು. ಈ ಕಾರ‍್ಯಕ್ರಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರು ಸೇರಿ ಅಂದಾಜು 2೦೦ ಜನರು ಪಾಲ್ಗೊಂಡು ಸಂಭ್ರಮಿಸಿದರು.
ಮಧ್ಯಾಹ್ನ ನಡೆದ ಸಭಾ ಕಾರ‍್ಯಕ್ರಮವನ್ನು ಶ್ರೀ ಹಾಲಾಡಿ ಶಾಂತರಾಮ ಶೆಟ್ಟಿ, ನಿವೃತ್ತ, ಡಿ.ಜಿ.ಎಂ., ವಿಜಯ ಬ್ಯಾಂಕ್ ಇವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು ಹಾಗೂ ಕಳಸಿಗೆ ಭತ್ತ ಸುರಿದು ನೆಣೆಕೋಲು ಹಚ್ಚುವ ಸಾಂಪ್ರದಾಯಿಕವಾಗಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತಾನು ಉದ್ಯೋಗ ನಿಮಿತ್ತ ರಾಜ್ಯದ ಬೇರೆ ಬೇರೆ ನೆಲಸಿದ್ದರೂ ನಾನು ಮಾತ್ರ ಭಾಷೆಯಾದ ಕುಂದಾಪ್ರ ಕನ್ನಡವನ್ನು ಈಗಲೂ ಮರೆತಿಲ್ಲ. ಮನೆಯಲ್ಲಿ ಕುಂದಗನ್ನಡವನ್ನೇ ಮಾಡನಾಡುತ್ತೇನೆ. ನಾವು ಎಂದೆಂದಿಗೂ ನಮ್ಮ ಮಾತೃ ಭಾಷೆಯನ್ನು ಬಳಸಿ ಉಳಿಸಿಬೇಕು ಎಂದು ಕರೆಕೊಟ್ಟರು. ಬಳಿಕ ಶ್ರೀ ಬಾಲಕೃಷ್ಣ ಶೆಟ್ಟಿ, ನಿವೃತ್ತ ಪ್ರಾಂಶುಪಾಲರು, ರಾಮಕೃಷ್ಣ ಕಾಲೇಜು, ಬಂಟ್ಸ್ ಹಾಸ್ಟೆಲು, ಮಂಗಳೂರು ಇವರು ಕುಂದಗನ್ನಡ ಶೈಲಿಯ ಲಘುಧಾಟಿಯ ಭಾಷಣದ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮಂತ್ರಮುಗ್ದರನ್ನಾಗಿ ಕುಳ್ಳಿರಿಸಿದರು. ನಂತರ ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ. ಮತ್ತು ಪಿಯು ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಲಾಯಿತು. ಕಾರ‍್ಯಕ್ರಮದ ಪ್ರಧಾನ ಪ್ರಾಯೋಜಕರಾದ ಶೇಖರ್ , ತಮನ್ವಿ ಕನ್ಸ್ಟ್ರಕ್ಷನ್ ಮಂಗಳೂರು ಮತ್ತು ಕುಂದಗನ್ನಡ ಕಲಾವಿದರಾದ ಶ್ರೀ ಚೇತನ್ ನೈಲಾಡಿ ಇವರನ್ನು ಸನ್ಮಾನಿಸಲಾಯಿತು. ಕರುಣಾಕರ ಬಳ್ಕೂರು ಸಂಪಾದಿತ ಕೃತಿ ಕುಂದಾಪ್ರ ಕನ್ನಡ ಕಥಾ ಸಂಕಲನ ‘ನುಡಿ ತೇರು’ ಹೊತ್ತಿಗೆಯನ್ನು ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಮಂಗಳೂರು ಸಂಸದರಾದ ಶ್ರೀ ಬ್ರಿಜೇಶ್ ಚೌಟ ಮತ್ತು ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ, ಅಧ್ಯಕ್ಷರು, ಬಂಟರ ಯಾನೆ ನಾಡವರ ಸಂಘ, ಮಂಗಳೂರು ಇವರು ಆಗಮಿಸಿ ಕಾರ‍್ಯಕ್ರಮಕ್ಕೆ ಶುಭ ಹಾರೈಸಿದರು.
ವಿಶ್ವ ಕುಂದಾಪುರ ಕನ್ನಡ ದಿನಾಚರಣೆ ಆಯೋಜನಾ ಸಮಿತಿ ಗೌರವಾಧ್ಯಕ್ಷರಾದ ಶ್ರೀ ದಯಾನಂದ ಶೆಟ್ಟಿ, ಉಪಾಧ್ಯಕ್ಷರಾದ ಶ್ರೀ ಮಮತ ಜಿ.ಐತಾಳ್ ಇವರು ಸಭೆಯಲ್ಲಿ ಹಾಜರಿದ್ದರು. ಆಯೋಜನಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಕೆ.ಶೆಟ್ಟಿಯವರು ಪ್ರಸ್ತಾವನೆಗೈದು ಅತಿಥಿಗಳನ್ನು ಸ್ವಾಗತಿಸಿದರು. ಆರ್.ಜೆ.ನಯನ ಮತ್ತು ಆರ್.ಜೆ.ಪ್ರಸನ್ನ ಕಾರ‍್ಯಕ್ರಮ ನಿರ್ವಹಿಸಿದರು. ಆಯೋಜನಾ ಸಮಿತಿ ಕಾರ್ಯದರ್ಶಿಯಾದ ಶ್ರೀ ರಾಮಕೃಷ್ಣ ಮರಾಟಿಯವರು ವಂದನಾರ್ಪಣೆಗೈದರು.
ಕುಡ್ಲದಗಿಪ್ಪ ಕುಂದಾಪುರದ ಎಲ್ಲಾ ಹಿರಿಯರು ಮತ್ತು ಮಾರ್ಗದರ್ಶಕರು ಈ ಕಾರ‍್ಯಕ್ರಮಕ್ಕೆ ಸಾಕ್ಷಿಯಾದರು.
ಬಳಿಕ ನಡೆದ ಸಾಂಸ್ಕೃತಿಕ ಕಾರ‍್ಯದಲ್ಲಿ ಕುಡ್ಲಗಿಪ್ಪ ಕುಂದಾಪುರದ ಸದಸ್ಯರು ವಿವಿಧ ನೃತ್ಯ, ಯಕ್ಷಗಾನ, ಹಾಡು ಮುಂತಾದ ಚಟುವಟಿಕೆಗಳನ್ನು ನಡೆಸಿಕೊಟ್ಟರು. ಚೇತನ್ ನೈಲಾಡಿ ತಂಡದಿಂದ ಹೆಂಗ್ಸ್ರ್ ಪಂಚೇತಿ ಎನ್ನುವ ಕುಂದಗನ್ನಡದ ವಿಶಿಷ್ಟವಾದ ಹಾಸ್ಯ ಚಟುವಟಿಕೆಯನ್ನು ನಡೆಸಿಕೊಟ್ಟರು.
ಸಾಂಸ್ಕೃತಿಕ ಕಾರ‍್ಯದ ಮಧ್ಯದಲ್ಲಿ ಬೆಳಿಗ್ಗೆ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಸಾಂಸ್ಕೃತಿಕ ಕಾರ‍್ಯಕ್ರಮದ ಧನ್ಯವಾದ ಸಮರ್ಪಣೆಯನ್ನು ಶ್ರೀ ಸಂತೋಷ್ ಕುಮಾರ್ ಶೆಟ್ಟಿ (ಏಸ್ ಬಾಂಡ್) ಇವರು ನೆರವೇರಿಸಿದರು.
ಅಂದಾಜು 450 ಜನ ಕುಡ್ಲಗಿಪ್ಪ ಕುಂದಗನ್ನಡಿಗರು ಈ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ರಾತ್ರಿ ಕುಂದಾಪುರ ಶೈಲಿಯ ವಿಶೇಷ ಭೋಜನದೊಂದಿಗೆ ಕಾರ‍್ಯಕ್ರಮವು ಸಂಪನ್ನಗೊಂಡಿತು.