ಕುಂದಾಪುರ: ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ಪದವಿ ಪ್ರದಾನ ಸಮಾರಂಭ

ಕುಂದಾಪುರ: ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ನ ಪ್ರಥಮ ಪದವಿ ಪ್ರಧಾನ ಸಮಾರಂಭ 28 ಫೆಬ್ರವರಿ 2025 ರಂದು ಜರಗಿತು. ಪ್ರಾರಂಭದಲ್ಲಿ ಎಲ್ಲಾ ಪದವೀಧರ ವಿದ್ಯಾರ್ಥಿಗಳನ್ನು ಮತ್ತು ಆಹ್ವಾನಿತ ಗಣ್ಯರನ್ನು ಮೆರವಣಿಗೆಯಲ್ಲಿ ಬರಮಾಡಿಕೊಳ್ಳಲಾಯಿತು ಮತ್ತು ಸ್ವಾಗತ ನೃತ್ಯ ಮತ್ತು ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಚಿಕ್ಕಮಗಳೂರಿನ ಆಶ್ರಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ತೇಜಸ್ವಿನಿ ಬಿ.ಎಚ್. (ಆರ್ ಜಿ ಯು ಎಚ್ ಎಸ್, ಯು ಜಿ, ಬಿ ಒ ಎಸ್, ಸದಸ್ಯರು) ಉಪಸ್ಥಿತರಿದ್ದರು. ಸಮಾರಂಭ ಉದ್ಘಾಟಿಸಿ ಮಾತನಾಡುತ್ತ, ವೇಗವಾಗಿ ವಿಕಸನಗೊಳ್ಳುತ್ತಿರುವ ಸುಧಾರಿತ ತಂತ್ರಜ್ಞಾನದಿಂದ ವಿಚಲಿತರಾಗುವ ಬದಲು, ಯಶಸ್ಸಿಗೆ ದೀರ್ಘಕಾಲೀನ ಮತ್ತು ಅಲ್ಪಾವಧಿಯ ಗುರಿಗಳತ್ತ ಗಮನ ಹರಿಸುವ ಮಹತ್ವವನ್ನು ಒತ್ತಿ ಹೇಳಿದರು.

ಗೌರವ ಅತಿಥಿಯಾಗಿ ಆಗಮಿಸಿದ ಉಡುಪಿ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ.ಎಚ್.ಅಶೋಕ್ ಮಾತನಾಡಿ, ದಾದಿಯರು ತಮ್ಮ ಸಮರ್ಪಣೆ ಮತ್ತು ನಿಸ್ವಾರ್ಥ ಕಾಳಜಿಯ ಮೂಲಕ ರೋಗಿಗಳಿಗೆ ದಿನನಿತ್ಯದ ಬೆಳಕಾಗಬೇಕು ಎಂದು ಹೇಳಿದರು.

ಐಎಂಜೆ ಸಂಸ್ಥೆಗಳ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕ ಡಾ.ರಾಮಕೃಷ್ಣ ಹೆಗಡೆ ಅವರು ಜೀವನದುದ್ದಕ್ಕೂ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಪ್ರಾಂಶುಪಾಲರಾದ ಪ್ರೊಫೆಸರ್ ಜೆನ್ನಿಫರ್ ಫ್ರೀಡಾ ಮೆನೆಜಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಪ್ರಶಸ್ತಿ ಪಡೆದ ವಿದ್ಯಾರ್ಥಿನಿ, ಬಿಶ್ಮಿ ಮ್ ಬಿ ಮಾತನಾಡಿ ತಾನು ಕಾಲೇಜಿನಲ್ಲಿ ಪಡೆದ ಅತ್ಯುತ್ತಮ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಗೆ, ಪ್ರಾಂಶುಪಾಲರು ಮತ್ತು ಪ್ರಧ್ಯಾಪಕರಿಗೆ ಧನ್ಯವಾದ ಅರ್ಪಿಸಿದಳಲ್ಲದೆ ತನ್ನ ನಾಲ್ಕು ಪರ್ಷದ ವಿದ್ಯಾರ್ಥಿ ಜೀವನದ ಸವಿನೆನಪುಗಳನ್ನು ನೆನಪಿಸಿದಳು. ಗಣ್ಯರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಗಳೊಂದಿಗೆ ಪದವಿಪ್ರದಾನಗೈದರು.

ಲ್ಯಾಂಪ್ ಲೈಟಿಂಗ್ ಕಾರ್ಯಕ್ರಮ:
ಈ ಸಂದರ್ಭದಲ್ಲಿ ಮೂಡ್ಲಕಟ್ಟೆ ನರ್ಸಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ನರ್ಸಿಂಗ್ ಗೆ ಪಾದಾರ್ಪಣೆ ಮಾಡುವ ಮೊದಲನೇ ಹಂತವಾಗಿ ದೀಪ ಬೆಳಗಿಸುವ ಮೂಲಕ ಪ್ರತಿಜ್ಞಾ ಸ್ವೀಕಾರವಿಧಿ ಸ್ವೀಕಾರ ಕಾರ್ಯಕ್ರಮವನ್ನು ನಡೆಸಲಾಯಿತು.

ಪ್ರಾಂಶುಪಾಲರಾದ ಪ್ರೊಫೆಸರ್ ಜೆನ್ನಿಫರ್ ಫ್ರೀಡಾ ಮೆನೆಜಸ್ ಮುಖ್ಯ ಅತಿಥಿಗಳೊಂದಿಗೆ ಸಾಂಕೇತಿಕವಾಗಿ ದೀಪ ಬೆಳಗಿಸಿ, ನರ್ಸಿಂಗ್ನಲ್ಲಿ ಅಂತರ್ಗತವಾಗಿರುವ ಪ್ರೀತಿ, ನಿಷ್ಠೆ, ತಾಳ್ಮೆ, ಸೇವೆ ಮತ್ತು ಶಿಸ್ತಿನ ಮೂಲ ಮೌಲ್ಯಗಳನ್ನು ಸೂಚಿಸಿದರು. ಪ್ರಾಂಶುಪಾಲೆ ಮತ್ತು ಉಪಪ್ರಾಂಶುಪಾಲೆ ರೂಪಶ್ರೀ ಕೆ.ಎಸ್ ಅವರು ಪ್ರಮಾಣ ವಚನ ಭೋದಿಸಿ ವಿದ್ಯಾರ್ಥಿಗಳಲ್ಲಿ ಜವಾಬ್ದಾರಿ ಮತ್ತು ಬದ್ಧತೆಯ ಪ್ರಜ್ಞೆಯನ್ನು ಮೂಡಿಸಿದರು.

ಕಾರ್ಯಕ್ರಮ ಪ್ರಾರಂಭದಲ್ಲಿ ಉಪಪ್ರಾಂಶುಪಾಲೆ ರೂಪಶ್ರೀ ಕೆ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಿಸ್ ರಕ್ಷಿತಾ ವಂದಿಸಿದರು, ಉಪನ್ಯಾಸಕಿ ಮಿಸ್ ಅಕ್ಷತಾ, ವಿದ್ಯಾರ್ಥಿಗಳಾದ ಮಿಸ್ ಶರೆಲ್ ಸಾರಾ ಮತ್ತು ಮಿಸ್ ಸೆರೆನಾ ಡಯಾಸ್ ಅವರು ಕಾರ್ಯಕ್ರಮ ನಿರೂಪಿಸಿದರು.
ಈ ಎರಡೂ ಕಾರ್ಯಕ್ರಮಗಳು ಪದವೀಧರರ ಸಾಧನೆಗಳನ್ನು ಆಚರಿಸುವುದಲ್ಲದೆ, ನರ್ಸಿಂಗ್ ವೃತ್ತಿಯನ್ನು ವ್ಯಾಖ್ಯಾನಿಸುವ ಆಳವಾದ ಮೌಲ್ಯಗಳು ಮತ್ತು ಜವಾಬ್ದಾರಿಗಳನ್ನು ತಿಳಿಸಲಾಯಿತು.