ಕುಂದಾಪುರ: ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿಕೆ) ತನ್ನ ಮೊದಲ ಅಂತರರಾಷ್ಟ್ರೀಯ ಸಮ್ಮೇಳನವನ್ನು ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ ಮತ್ತು ದತ್ತಾಂಶ ವಿಜ್ಞಾನದ ಕುರಿತು ಹೈಬ್ರಿಡ್ ವಿಧಾನ ದಲ್ಲಿ ಆಯೋಜಿಸಿದ್ದು, ಸಂಸ್ಥೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.
ಎ ಐ ಎಂ ಎಲ್ ವಿಭಾಗ ಮುಖ್ಯಸ್ಥರು ಹಾಗೂ ಸಮ್ಮೇಳನದ ಅಧ್ಯಕ್ಷರಾದ ಡಾ. ಇಂದ್ರವಿಜಯ್ ಸಿಂಗ್, ಸಭೆಯನ್ನುದ್ದೇಶಿಸಿ ಮಾತನಾಡಿ ಎ ಐ ಮತ್ತು ಎಂ ಎಲ್ ದೈನಂದಿನ ಜೀವನಕ್ಕೆ ಹೇಗೆ ಅವಿಭಾಜ್ಯವಾಗುತ್ತಿವೆ ಎಂಬುದನ್ನು ಹೇಳಿದರು. ಡಾ. ಸಿಂಗ್ ಅವರು ಮೀನುಗಾರಿಕೆಯಲ್ಲಿ ಎ ಐ ಮತ್ತು ಎಂ ಎಲ್ ಹೇಗೆ ಉಪಯೋಗಿಸಬಹುದು ಎಂಬುದನ್ನು ಚರ್ಚಿಸುವುದು ಸಮ್ಮೇಳನದ ಗುರಿ ಎಂದರಲ್ಲದೆ ಈ ಸಮ್ಮಳನದಲ್ಲಿ ಹಲವಾರು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರತಿನಿಧಿಗಳಿಂದ ಅತ್ಯುತ್ತಮ ಲೇಖನಗಳು ಮಂಡಿಸಲ್ಪಡುತ್ತಿವೆಯೆಂದರು.
ಪ್ರಾಧ್ಯಾಪಕಿ ಸುಷ್ಮಾ ಶೆಟ್ಟಿ ಅತಿಥಿ ಉಪನ್ಯಾಸಕರನ್ನು ಪರಿಚಯಿಸಿದರು. ಕಾರವಾರದ ಕೇಂದ್ರೀಯ ಸಾಗರ ಮೀನುಗಾರಿಕಾ ಸಂಶೋಧನಾ ಸಂಸ್ಥೆಯ ಐಸಿಎಆರ್‌ನ ಹಿರಿಯ ವಿಜ್ಞಾನಿ ಡಾ.ಪುರುಷೋತ್ತಮ ಜಿ.ಬಿ. ಅವರು ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಎ ಐ ಮತ್ತು ಎಂ ಎಲ್ ನಲ್ಲಿ ಆದ ಇತ್ತೀಚಿನ ಆವಿಷ್ಕಾರಗಳು ಮತ್ತು ಪ್ರಗತಿಗಳನ್ನು ಚರ್ಚಿಸಿದರು ಹಾಗು ಮೀನುಗಾರಿಕೆಯಲ್ಲಿ ಪರಿಚಯಿಸಲಾದ ಎಐಎಂಎಲ್ ಉಪಯೋಗದ ಬಗ್ಗೆ ಅವರು ವಿವರಿಸಿದರು.
ಎಂಐಟಿಕೆ ಪ್ರಾಂಶುಪಾಲರಾದ ಡಾ.ಅಬ್ದುಲ್ ಕರೀಂ ತಮ್ಮ ಭಾಷಣದಲ್ಲಿ, ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆ ಬೇಡಿಕೆಗಳು ಮತ್ತು ಈ ಬೆಳವಣಿಗೆಗಳಿಗೆ ಸರಿಹೊಂದುವಂತೆ ಶೈಕ್ಷಣಿಕ ಪಠ್ಯಕ್ರಮವನ್ನು ನವೀಕರಿಸುವಲ್ಲಿನ ಸವಾಲುಗಳ ಬಗ್ಗೆ ಮಾತನಾಡಿದರು. ಅವರು ಎಂಜಿನಿಯರ್‌ಗಳು ಮತ್ತು ಮೀನುಗಾರಿಕಾ ವಲಯದ ನಡುವಿನ ಸಹಯೋಗದ ಮಹತ್ವ ತಿಳಿಸಿದರು. ಅವರು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಇಂತಹ ತಾಂತ್ರಿಕ ಸಮ್ಮೇಳನಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ವಿದ್ಯಾರ್ಥಿನಿ ಫಾತಿಮಾ ಅವರು ಧನ್ಯವಾದ ಸಲ್ಲಿಸಿದರು. ವಿದ್ಯಾರ್ಥಿನಿ ಮೇಘನಾ ಕಾರ್ಯಕ್ರಮ ನಿರ್ವಹಿಸಿದರು. ರಾಷ್ಟ್ರ ಗೀತೆಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯವಾಯಿತು.