ಕುಂದಾಪುರ: ಬಸ್ಸು-ಬೈಕ್ ನಡುವೆ ಅಪಘಾತ: ಪುರಸಭೆ ಪೌರಕಾರ್ಮಿಕ ಮೃತ್ಯು.

ಕುಂದಾಪುರ: ಬಸ್- ಬೈಕ್ ನಡುವೆ ಅಪಘಾತ ನಡೆದ ಪರಿಣಾಮ ಪುರಸಭೆ ಪೌರಕಾರ್ಮಿಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ಹಂಗಳೂರು ಬಳಿ ಗುರುವಾರ ರಾತ್ರಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಬಾರಕೂರಿನ ನಿವಾಸಿ, ಕುಂದಾಪುರ ಪುರಸಭೆಯಲ್ಲಿ ಪೌರಕಾರ್ಮಿಕ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಂದರ (39) ಎಂದು ಗುರುತಿಸಲಾಗಿದೆ.

ಮೃತರು ತಂದೆ, ತಾಯಿಯನ್ನು ಅಗಲಿದ್ದಾರೆ. ಇವರು ಕೋಟೇಶ್ವರ ಕಡೆಯಿಂದ ಬೈಕ್ ನಲ್ಲಿ ಸರ್ವಿಸ್ ರಸ್ತೆಯಲ್ಲಿ ಬರುತ್ತಿದ್ದಾಗ ಹೆದ್ದಾರಿಯಿಂದ ಖಾಸಗಿ ಬಸ್ ಡಿಪೋಗೆ ನುಗ್ಗುತ್ತಿದ್ದಾಗ ಢಿಕ್ಕಿಯಾಗಿದೆ. ಸ್ಥಳದಲ್ಲೇ ಸುಂದರ ಅವರು ಮೃತಪಟ್ಟಿದ್ದು ನೂರಾರು ಜನ ಜಮಾಯಿಸಿದರು. ವೃತ್ತ ನಿರೀಕ್ಷಕ ನಂದಕುಮಾರ್ ಸಹಿತ ಪೊಲೀಸರು ಘಟನ ಸ್ಥಳಕ್ಕೆ ತೆರಳಿದ್ದರು. ಮೃತರು ಕಳೆದ 15 ವರ್ಷಗಳಿಂದ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ನಾಲ್ಕು ತಿಂಗಳ ಹಿಂದಷ್ಟೇ ಖಾಯಂ ನೇಮಕಾತಿ ಆದೇಶ ಪಡೆದಿದ್ದರು. ಖಾಸಗಿ ಬಸ್ಸುಗಳು ಇಲ್ಲಿ ಹಗಲು ವೇಳೆ ಕೂಡಾ ಬೇಕಾಬಿಟ್ಟಿ ಚಲಿಸುತ್ತವೆ. ಅದಕ್ಕೆ ಪೂರಕವಾಗಿ ಸರ್ವಿಸ್ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ಗಳಿವೆ.