ಕುಂದಾಪುರ : ಕುಂದಾಪುರ ಶ್ರೀ ವೆಂಕಟರಮಣ ಪಿಯು ಕಾಲೇಜಿನಲ್ಲಿ ವ್ಯವಹಾರ ದಿನ ವಿ-ವಿಸ್ತಾರ್ 2k24 ಡಿಸೆಂಬರ್ 7 ಬೆಳಿಗ್ಗೆ 9 ಗಂಟೆಯಿಂದ ಕಾಲೇಜು ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮವನ್ನು ಅರೇಕಾ ಟಿ ಇದರ ಸಂಸ್ಥಾಪಕ, ಸಿಇಓ ನಿವೇದನ್ ನೆಂಪೆ ಉದ್ಘಾಟಿಸಲಿದ್ದಾರೆ. ಶ್ರೀ ವೆಂಕಟರಮಣ ದೇವ್ ಎಜ್ಯುಕೇಶನ್ ಮತ್ತು ಕಲ್ಚರಲ್ ಟ್ರಸ್ಟ್ ಅಧ್ಯಕ್ಷರಾದ ಕೆ.ರಾಮಕೃಷ್ಣ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಬಿ.ಎಸ್ ಸುರೇಶ ಶೆಟ್ಟಿ ಉಪ್ಪುಂದ, ದಿನೇಶ ಹೆಗ್ಡೆ ಮೊಳಹಳ್ಳಿ ಭಾಗವಹಿಸಲಿದ್ದಾರೆ. ಟ್ರಸ್ಟ ಕಾರ್ಯದರ್ಶಿ ಕೆ.ರಾಧಾಕೃಷ್ಣ ಶೆಣೈ, ಕೋಶಾಧಿಕಾರಿ ಕೆ.ಲಕ್ಷ್ಮೀನಾರಾಯಣ ಶೆಣೈ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡ ಸಮಾಜಸೇವಕರಾದ ಬೆಂಕಿಮಣಿ ಸಂತು (ಮಾನವೀಯ ಸೇವೆ) ರಾಘವೇಂದ್ರ ನೆಂಪು (50ಬಾರಿ ರಕ್ತದಾನ) ಮಂಜುನಾಥ ನಾಯ್ಕ್ ಕನ್ನೇರಿ (ಮುಳುಗು ತಜ್ಞರು) ಶಂಕರ ಪೂಜಾರಿ ಅಂಪಾರು (ಉರಗ ತಜ್ಞರು), ಗಣೇಶ ಕಂಬದಕೋಣೆ (ಸ್ವಚ್ಛತಾ ಸೇವೆ) ಇವರನ್ನು ಸನ್ಮಾನಿಸಲಾಗುವುದು.
ಉಡುಪಿ ಜಿಲ್ಲೆಯಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ವ್ಯವಹಾರ ಕೌಶಲ್ಯದ ಅರಿವು ಮೂಡಿಸುವ ನಿಟ್ಟಿನಲ್ಲಿ ಆರಂಭಿಸಿದ ವ್ಯವಹಾರ ದಿನ ಅದ್ಭುತ ಯಶಸ್ಸು ಪಡೆದುಕೊಂಡು ಕಳೆದ ಮೂರು ವರ್ಷಗಳಲ್ಲಿ ಅಭುತಪೂರ್ವ ಯಶಸ್ಸು ಕಂಡಿದೆ. ಇದು ನಾಲ್ಕನೇ ವರ್ಷದ ವ್ಯವಹಾರ ದಿನಕ್ಕೆ ಕಾಲೇಜು ಸಿದ್ಧವಾಗಿದೆ. ಈ ಬಾರಿ 70 ಅಧಿಕ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆಯಲಿದ್ದಾರೆ. ವೈವಿಧ್ಯಮಯ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆಯಲಿದ್ದು ಲಾಭಾಂಶವನ್ನು ಸಮಾಜ ಸೇವಾ ಸಂಸ್ಥೆಗಳಿಗೆ ನೀಡಲಿದ್ದಾರೆ.
ವ್ಯವಹಾರ ಮೇಳದ ಮೂಲಕ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವ್ಯವಹಾರ ಕುಶಲತೆ, ಉದ್ಯಮಶೀಲತೆ, ವ್ಯವಹಾರ ಜ್ಞಾನ, ಆತ್ಮವಿಶ್ವಾಸ, ಮಾರುಕಟ್ಟೆ ಪರಿಚಯ, ಸವಾಲುಗಳ ಬಗ್ಗೆ ಅರಿವಾಗುತ್ತದೆ. ಸಾರ್ವಜನಿಕರು, ಉದ್ಯಮಿಗಳು ವಿದ್ಯಾರ್ಥಿಗಳ ವ್ಯವಹಾರ ದಿನಕ್ಕೆ ಭೇಟಿ ನೀಡಿ ಪ್ರೋತ್ಸಾಹಿಸಲಿದ್ದಾರೆ. ಬೇರೆ ಬೇರೆ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು ಭೇಟಿ ನೀಡಲಿದ್ದಾರೆ.