ಕುಂದಾಪುರ: ಚಡ್ಡಿ ಮತ್ತು ಬನಿಯನ್ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಅಪರಿಚಿತ ವ್ಯಕ್ತಿ

ಉಡುಪಿ: ಕುಂದಾಪುರದ ಕೋಡಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಚಡ್ಡಿ ಮತ್ತು ಬನಿಯನ್ ಧರಿಸಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದು, ಆತನನ್ನು ಕಂಡು ಅನುಮಾನಗೊಂಡ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕುಂದಾಪುರ ತಾಲೂಕಿನ ಕೋಡಿ ಭಾಗದ ಫಿಶರೀಸ್ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಸುಮಾರು 30 ರಿಂದ 35 ವರ್ಷ ವಯಸ್ಸಿನ ಯುವಕ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ವಿಚಾರಿಸಿದಾಗ ಸರಿಯಾದ ಉತ್ತರ ನೀಡದೆ ಇದ್ದ ಕಾರಣ ಅನುಮಾನಗೊಂಡ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮೂರು ನಾಲ್ಕು ದಿನಗಳ ಹಿಂದೆ ರಾತ್ರಿ ಬಿಳಿ ಬನಿಯನ್ ಮತ್ತು ಚಡ್ಡಿಯಲ್ಲಿ ಓಡಾಡುತ್ತಿದ್ದ ಈ ವ್ಯಕ್ತಿ ಯಾವುದೋ ಚಡ್ಡಿ ಗ್ಯಾಂಗಿನ ಸದಸ್ಯ ಇರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಅಲ್ಲದೆ ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದರಿಂದ ಕಳ್ಳತನಕ್ಕೆ ಯತ್ನಿಸುತ್ತಿರಬಹುದು ಎಂದು ಭಾವಿಸಿದ್ದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ವಶಕ್ಕೆ ಪಡೆದುಕೊಳ್ಳಲಾದ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದು, ಮದ್ಯ ಸೇವನೆ ಮಾಡಿದ್ದ ಎನ್ನಲಾಗಿದೆ. ಈಗ ಘಟನೆಯ ವಿಡಿಯೋಗಳು ವೈರಲ್ ಆಗುತ್ತಿದೆ.