ಕುಂದಾಪುರ: ತಾಲೂಕಿನ ಬಸ್ರೂರಿನಲ್ಲಿ ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಶನಿವಾರ ನಡೆದಿದೆ. ಮನೆಯ ಬಾಗಿಲು ಲಾಕ್ ಮಾಡಿಕೊಂಡು ಪತ್ನಿಗೆ ಹಲ್ಲೆ ಮಾಡಿ ಹುಟ್ಟಾಟವಾಡುತ್ತಿದ್ದ ವ್ಯಕ್ತಿಯನ್ನು ಸೆರೆಹಿಡಿಯಲು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹರಸಾಹಸಪಟ್ಟಿದ್ದು, ಕೊನೆಗೂ ವ್ಯಕ್ತಿಯನ್ನು ಸೆರೆಹಿಡಿದು ಬಂಧಿಸಲಾಗಿದೆ. ಪತ್ನಿಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಅನಿತಾ (38) ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಲಕ್ಷ್ಮಣ (40) ಎಂಬಾತನನ್ನು ಬಂಧಿಸಲಾಗಿದೆ.
ಬಸ್ರೂರಿನ ರೆಸಿಡೆನ್ಶಿಯಲ್ ಬ್ಲಾಕ್ʼನ ಬಾಡಿಗೆ ಮನೆಯಲ್ಲಿ ಅನಿತಾ – ಲಕ್ಷ್ಮಣ ದಂಪತಿ ವಾಸವಾಗಿದ್ದು, ಕಾಶಿ ಮಠದ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ನಿನ್ನೆ ಯಾವುದೋ ವಿಚಾರಕ್ಕೆ ಇವರಿಬ್ಬರ ನಡುವೆ ನಡೆದ ಜಗಳವು ವಿಕೋಪಕ್ಕೆ ತಿರುಗಿದೆ. ಬಳಿಕ ಆರೋಪಿ ಪತಿಯು, ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾನೆ. ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ ಬಳಿಕ ಆರೋಪಿಯು ಮನೆಯ ಒಳಗಿನಿಂದ ಬಾಗಿಲನ್ನು ಭದ್ರವಾಗಿ ಹಾಕಿಕೊಂಡಿದ್ದಾನೆ. ಅಡುಗೆ ಮನೆಯಲ್ಲಿ ಪತ್ನಿ ಅನಿತಾ (38) ರಕ್ತದ ಮಡುವಿನಲ್ಲಿ ಬಿದ್ದಿದ್ದರು. ವಿಷಯ ತಿಳಿದ ಸ್ಥಳೀಯರು ಅಡುಗೆ ಮನೆಯ ಕಿಟಕಿ ಬಾಗಿಲು ಒಡೆದು ಕೋಣೆಯ ಒಳಗೆ ತೆರಳಿ ಆಕೆಯನ್ನು ಹೊರಗೆ ಕರೆತಂದಿದ್ದಾರೆ. ಮಾರಣಾಂತಿಕ ಹಲ್ಲೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಅನಿತಾರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿದ ಬಳಿಕವೂ ಪತಿ ಮಾತ್ರ ಬಾಗಿಲು ತೆಗೆಯದೇ ಕತ್ತಿ ಹಿಡಿದು ನೃತ್ಯ ಮಾಡುತ್ತಿದ್ದನು. ಘಟನಾ ಸ್ಥಳಕ್ಕೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿ ಶಾಮಕ ಸಿಬಂದಿ ಆರೋಪಿಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ಆರೋಪಿಯು ಕೈಯಲ್ಲಿ ಕತ್ತಿ ಹಿಡಿದು ಹೆದರಿಸುತ್ತಿದ್ದುದರಿಂದ ಎದುರಿನ ಬಾಗಿಲು ಮುರಿದು ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಬಳಿಕ ಪೊಲೀಸರು ಆತನಿದ್ದ ರೂಮಿನ ಕಿಟಕಿ ಮೂಲಕ ಖಾರದ ಪುಡಿ ಎರಚಿದ್ದು, ಅದರಿಂದ ಆತ ತಪ್ಪಿಸಿಕೊಂಡಿದ್ದಾನೆ. ಬಳಿಕ ಏರ್‌ಗನ್ ಮೂಲಕ ಗ್ಯಾಸ್ ಸಿಂಪಡಿಸಿದ್ದು, ಅದರಿಂದಲೂ ತಪ್ಪಿಸಿಕೊಂಡಿದ್ದಾನೆ. ಬಳಿಕ ಪೊಲೀಸರು ಎದುರಿನ ಬಾಗಿಲನ್ನು ಒಡೆಯಲು ಪ್ರಯತ್ನಿಸುತ್ತಿರುವಂತೆ ಮಾಡಿ, ಮತ್ತೊಂದು ತಂಡ ಕಿಟಕಿ ಮೂಲಕ ಮನೆ ಒಳಗೆ ಪ್ರವೇಶಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.