ಕುಂದಾಪುರದ ತ್ರಾಸಿ ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ ( ಗಗನದಲ್ಲಿ ಊಟ) ತಾಣವಾಗಲಿದೆ

ಕುಂದಾಪುರ:ಪಣಂಬೂರು ಬೀಚ್‌ ಬಳಿಕ ಕುಂದಾಪುರದ ತ್ರಾಸಿಯ ಕಡಲ ಕಿನಾರೆಯು ರಾಜ್ಯದ ಎರಡನೇ “ಸ್ಕೈ ಡೈನಿಂಗ್‌’ (ಗಗನದಲ್ಲಿ ಊಟ) ತಾಣ ವಾಗಲಿದೆ. ನೆಲ ಮಟ್ಟದಿಂದ ಸುಮಾರು 60-70 ಅಡಿ ಎತ್ತರದಲ್ಲಿ ತ್ರಾಸಿ- ಮರವಂತೆ ಕಡಲು- ಸೌಪರ್ಣಿಕಾ ನದಿ ಮಧ್ಯೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಅತ್ಯದ್ಭುತ ಸೊಬಗನ್ನು ಕಣ್ತುಂಬಿಕೊಳ್ಳುವ ಜತೆಗೆ, ರುಚಿಕರವಾದ ತಿನಿಸುಗಳನ್ನು ಸವಿಯುವ ಅವಕಾಶ ಇದಾಗಿದೆ.

ಉಡುಪಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಯಿಂದ ಕಾರ್ಯಾದೇಶ ನೀಡಲಾಗಿದ್ದು, ಅದಕ್ಕೆ ಬೇಕಾದ ಅನುಮತಿ, ಸುರಕ್ಷೆ ಕ್ರಮಗಳ ಪರಿಶೀಲನೆಯೂ ಆಗಿದೆ. ಇದಕ್ಕೆ ಅಗತ್ಯ ಸಿದ್ಧತೆಗಳೂ ನಡೆಯುತ್ತಿದ್ದು, 15-20 ದಿನಗಳೊಳಗೆ ಈ “ಸ್ಕೈ ಡೈನಿಂಗ್‌’ ಆರಂಭಗೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ತ್ರಾಸಿ – ಮರವಂತೆ ಬೀಚ್‌ ಮತ್ತಷ್ಟು ಆಕರ್ಷಣೀಯವಾಗಲಿದೆ.

ಏನಿದು ಸ್ಕೈ ಡೈನಿಂಗ್‌?
ಟೀಮ್‌ ಮಂತ್ರಾಸ್‌ ಇಂಟರ್‌ನ್ಯಾಶನಲ್‌ ಸಂಸ್ಥೆಯು ಸ್ಕೈ ಡೈನಿಂಗ್‌ ಯೋಜನೆಯನ್ನು ನಿರ್ವಹಿಸಲಿದೆ. ಪಾರದರ್ಶಕ ಗಾಜು ಮತ್ತು ಕಬ್ಬಿಣದಿಂದ ನಿರ್ಮಿಸಲಾದ ಕ್ಯಾಬಿನ್‌ ಅನ್ನು ಕ್ರೇನ್‌ ಬಳಸಿ ಸುಮಾರು 60-70 ಅಡಿ ಎತ್ತರಕ್ಕೆ ಏರಿಸಲಾಗುತ್ತದೆ. ಏಕಕಾಲದಲ್ಲಿ 16 ಮಂದಿ ಕುಳಿತು ಆಹಾರ ಸೇವಿಸುವ ಅವಕಾಶವಿದೆ. ಇಷ್ಟು ಎತ್ತರದಿಂದ ಕಡಲು, ಹೆದ್ದಾರಿ, ನದಿಯ ವಿಹಂಗಮ ನೋಟವನ್ನು ಸವಿಯುವುದರ ಜತೆಗೆ ಸಂಗೀತವನ್ನು ಆಸ್ವಾದಿಸಿಕೊಳ್ಳಬಹುದು. ಅಡುಗೆ ಮತ್ತು ತಾಂತ್ರಿಕ ಸಿಬ್ಬಂದಿಗೆ ಪ್ರತ್ಯೇಕ ಕ್ಯಾಬಿನ್‌ ಇರಲಿದೆ. ಸ್ಕೈ ಡೈನಿಂಗ್‌ ಇತ್ತೀಚೆಗಿನ ದಿನಗಳಲ್ಲಿ ದೇಶಾದ್ಯಂತ ಜನಪ್ರಿಯತೆ ಗಳಿಸುತ್ತಿದ್ದು, ರಾಜ್ಯದಲ್ಲಿ ಇನ್ನಷ್ಟೇ ಪ್ರಸಿದ್ಧಿ ಪಡೆಯಬೇಕಿದೆ.

ತ್ರಾಸಿ – ಮರವಂತೆ ಬೀಚ್‌ ರಾಜ್ಯದ ಅತ್ಯಂತ ಸುಂದರ ಹಾಗೂ ವಿಶಿಷ್ಟವಾದ ಕಡಲ ತೀರ. ಸ್ಕೈ ಡೈನಿಂಗ್‌ ಮೂಲಕ ಅಪರೂಪವಾದ ವರಾಹ ಶ್ರೀ ಮಹಾ ರಾಜ ಸ್ವಾಮಿ ದೇವಸ್ಥಾನ, ಮೀನುಗಾರಿಕೆ ದೋಣಿಗಳು, ಹೊರ ಬಂದರು, ಮರವಂತೆ ಕುದ್ರುವನ್ನು ಕೂಡ ವೀಕ್ಷಿಸಬಹುದು. ಹೆದ್ದಾರಿಯಲ್ಲಿ ಸಂಚರಿಸುವ ಪಯಣಿಗರನ್ನು ಆಕರ್ಷಿಸುತ್ತಿದ್ದ ಬೀಚ್‌ ಈ ಸ್ಕೈ ಡೈನಿಂಗ್‌ನಿಂದಾಗಿ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಬಹುದು.

ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯಿಂದ ಖಾಸಗಿಯವರಿಗೆ ಕಾರ್ಯಾದೇಶ ನೀಡಲಾಗಿದ್ದು, ಅವರು ಸಿದ್ಧತೆ ಆರಂಭಿಸುತ್ತಿದ್ದಾರೆ. ಅಗತ್ಯ ಸುರಕ್ಷೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದಿನ 15 ದಿನಗಳೊಳಗೆ ಆರಂಭಗೊಳ್ಳುವ ನಿರೀಕ್ಷೆಯಿದೆ. ಇದು ಬೀಚ್‌ ಪ್ರವಾಸೋದ್ಯಮ ನಿಟ್ಟಿನಲ್ಲಿ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಹೆಜ್ಜೆಯಾಗಿದೆ.”
ಕುಮಾರ್‌ ಸಿ.ಯು. ಸ.ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ ಉಡುಪಿ
– ಪ್ರಶಾಂತ್‌ ಪಾದೆ