ಕಾರ್ಕಳ: ಹಿರಿಯ ಪತ್ರಕರ್ತ ಬಿ.ಎಂ.ಬಶೀರ್ ಗೆ ʼಡಾ. ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿʼ ಪ್ರದಾನ

ಉಡುಪಿ: ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಿರಿಯ ಪತ್ರಕರ್ತ ಬಿ.ಎಂ.ಬಶೀರ್ ಅವರಿಗೆ ʼಡಾ. ಶೇಖರ್ ಅಜೆಕಾರ್ ರಾಜ್ಯ ಪ್ರಶಸ್ತಿʼ ಪ್ರದಾನ ಮಾಡಲಾಯಿತು.

ಕಾರ್ಕಳದ ಎಸ್‌ವಿಟಿ ಕಾಲೇಜು ಸಭಾಂಗಣದಲ್ಲಿ ಇಂದು ನಡೆದ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ನ್ಯಾ. ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಮಾಜದ ಕಣ್ಣುಗಳು. ಅವರೇ ಸಮಾಜವನ್ನು ಬದಲಾಯಿಸುವವರು.

ಮಾನವೀಯತೆಯನ್ನು ರೂಢಿಸಿಕೊಂಡು, ಶಾಂತಿ ಸೌಹಾರ್ದ ಭಾವನೆಯನ್ನು ಕಾಪಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರೋಧಿ ನಿಲುವಿಗೆ ಬದ್ಧರಾಗಿ ಉತ್ತಮ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.
ಎಸ್.ವಿ.ಟಿ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಕೆ.ಪಿ.ಶೆಣೈ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಹಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದ್ದರು.