ಕಾರ್ಕಳ ಯುವತಿ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ಬಿಜೆಪಿ ಕಾರ್ಯಕರ್ತ- ಫೋಟೋ ಬಿಡುಗಡೆ ಮಾಡಿದ ಕಾಂಗ್ರೆಸ್

ಉಡುಪಿ: ಕಾರ್ಕಳದಲ್ಲಿ ಇತ್ತೀಚೆಗೆ ನಡೆದಿದ್ದ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ಬಿಜೆಪಿ ಕಾರ್ಯಕರ್ತ ಎಂದು ಹೇಳಿರುವ ಕಾಂಗ್ರೆಸ್ ಈ ಸಂಬಂಧ ಆತನ ಫೋಟೋಗಳನ್ನು ಬಿಡುಗಡೆ ಮಾಡಿದೆ. ಕಾರ್ಕಳ ಮತ್ತು ಉಡುಪಿ ಯುವ ಕಾಂಗ್ರೆಸ್ ನಾಯಕರು ಫೋಟೋ ಬಿಡುಗಡೆಗೊಳಿಸಿದ್ದು, ಬಿಜೆಪಿಯ ದ್ವಂದ್ವ ನಿಲುವಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಮೊದಲ ಆರೋಪಿ ಅಲ್ತಾಫ್ ಬಂಧನ ನಡೆದಾಗ ಬಿಜೆಪಿ ಪಟಾಲಂ ಅಬ್ಬರಿಸಿ ಬೊಬ್ಬಿರಿಯಿತು. ಸಂತ್ರಸ್ತ ಹುಡುಗಿ ಹಿಂದುವಾಗಿ ಕಂಡಳು. ಅತ್ಯಾಚಾರ ಪ್ರಕರಣವನ್ನು “ಜಿಹಾದಿ” ಕೃತ್ಯವಾಗಿ ಚಿತ್ರಿಸಲಾಯಿತು. ಸರಣಿ ಪ್ರತಿಭಟನೆ, ಪತ್ರಿಕಾ ಹೇಳಿಕೆಗಳು ಹೊರಟವು. ಎನ್ ಐಎ ತನಿಖೆ ನಡೆಯಬೇಕೆಂಬ ಆಗ್ರಹಗಳು ಕೇಳಿ ಬಂದವು. ಆದರೆ ಬಂಧನಕ್ಕೊಳಗಾಗಿದ್ದ ಮೂರನೇ ಆರೋಪಿ ಅಭಯ್ , ಬಿಜೆಪಿ ಕಾರ್ಯಕರ್ತ ಎಂದು ಗೊತ್ತಾದ ಬಳಿಕ ಬಿಜೆಪಿ ಮೌನಕ್ಕೆ ಶರಣಾಗಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದರು.

ಹಿಂದೂ ಯುವತಿಯ ಅತ್ಯಾಚಾರ ಪ್ರಕರಣದ ಮೂರನೇ ಆರೋಪಿ ಮಾಜಿ ಸಚಿವ ಸುನಿಲ್ ಆಪ್ತನಾಗಿದ್ದು ಫೇಸ್ ಬುಕ್ ಪ್ರೊಫೈಲ್ ನಲ್ಲೂ ಸುನಿಲ್ ಕುಮಾರ್ ಫೋಟೋ ಹಾಕಿಕೊಂಡಿದ್ದಾನೆ. ಈತ ಕಾರ್ಕಳ ಬಿಜೆಪಿಯಲ್ಲಿ ಸಕ್ರಿಯ ಸದಸ್ಯನಾಗಿದ್ದಾನೆ. ಇದು ಗೊತ್ತಾಗುತ್ತಿದ್ದಂತೆ ಬಿಜೆಪಿ ನಾಯಕರು ಹೋರಾಟವನ್ನು ಕೈಬಿಟ್ಟಿದ್ದಾರೆ. ಅತ್ಯಾಚಾರದಂತಹ ಪ್ರಕರಣದಲ್ಲಿ ಯಾವುದೇ ಧರ್ಮ, ಪಕ್ಷದವರಿದ್ದರೂ ಅದನ್ನು ಖಂಡಿಸುವ ಬದಲು ಧರ್ಮಾಧಾರಿತವಾಗಿ ಅದನ್ನು ಬಿಜೆಪಿ ನೋಡುತ್ತಿದೆ ಎಂದು ಕೈ ಮುಖಂಡರು ಆಕ್ರೋಶ ಹೊರಹಾಕಿದರು.