ಕಾರ್ಕಳ: ಶ್ರಮ ಜೀವಿ ಸಮಾಜ ಭೋವಿ ಸಮುದಾಯದ ಬಡ ಯುವತಿಯೋರ್ವಳಿಗೆ ಮತ್ತು ಭರಿಸುವಂತ ಅಮಲು ಪದಾರ್ಥ ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಕೃತ್ಯ ಅತ್ಯಂತ ಖಂಡನೀಯ. ಇದೊಂದು ಪೈಶಾಚಿಕ ಕೃತ್ಯ ಎಂದು ಘಟನೆಯನ್ನು ಮಾಜಿ ಸಚಿವ, ಶಾಸಕ ವಿ ಸುನಿಲ್ ಕುಮಾರ್ ಕಟು ಶಬ್ದಗಳಿಂದ ಟೀಕಿಸಿದ್ದಾರೆ.
ಯುವತಿಯನ್ನು ಪುಸಲಾಯಿಸಿ ಅಮಲು ಪದಾರ್ಥದೊಂದಿಗೆ ಕಾರಿನಲ್ಲಿ ಸುಮಾರು ದೂರ ಪಳ್ಳಿ ತನಕ ಕರೆದೊಯ್ದು ಅಮಲು ಪದಾರ್ಥ ನೀಡಿ ಈ ಕೃತ್ಯ ನಡೆಸಿದ್ದಾರೆ ಎಂದರೆ ಇದನ್ನು ಊಹಿಸಲು ಅಸಾದ್ಯ. ಇದೊಂದು ಪೂರ್ವಯೋಜಿತ ಕೃತ್ಯ ಎನ್ನುವ ಸಂದೇಹ ದಟ್ಟವಾಗಿ ಕಾಣುತ್ತದೆ. ಪ್ರಕರಣ ಸಂಬಂಧ ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಬೇಕು. ಈ ಮೂಲಕ ಪ್ರಕರಣ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಬೇಧಿಸಬೇಕು. ಈ ಹಿಂದೆಯೂ ಇಂತಹ ಕೃತ್ಯ ಎಸಗಿರುವ ಸಾಧ್ಯತೆ ದೃಷ್ಟಿಯಿಂದಲೂ ಸೂಕ್ತ ತನಿಖೆಯಾಗಬೇಕು. ಸಂತ್ರಸ್ಥ ಯುವತಿಯ ಆರೋಗ್ಯ ವೆಚ್ಚವನ್ನು ಸರಕಾರ ಭರಿಸಬೇಕು. ಜಿಲ್ಲಾಡಳಿತ ಯುವತಿಗೆ ಮಾನಸಿಕ ಧೈರ್ಯ ತುಂಬಿ, ಯುವತಿ ಮತ್ತು ಕುಟುಂಬಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದವರು ಆಗ್ರಹಿಸಿದ್ದಾರೆ.