ಕಾರ್ಕಳ: ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ವಿತರಣೆ.

ಕಾರ್ಕಳ, ಡಿ.02: ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸ್ವಾವಲಂಬಿ ಅರ್ಹ ಫಲಾನುಭವಿ ಮಹಿಳೆಯರಿಗೆ
ಉಚಿತ ಹೊಲಿಗೆ ಯಂತ್ರ ವಿತರಣೆಯು ಡಿಸೆಂಬರ್ 02 ರಂದು ವಿಕಾಸ ಕಚೇರಿಯಲ್ಲಿ ನಡೆಯಿತು.

ಶಾಸಕ ವಿ. ಸುನಿಲ್ ಕುಮಾ‌ರ್ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಾಗಬೇಕು ಮತ್ತು ಸ್ವಾವಲಂಬಿಗಳಾಗಿ ದುಡಿಯಬೇಕು ಎನ್ನುವ ನಿಟ್ಟಿನಲ್ಲಿ ಸರಕಾರವು ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ವಿತರಣೆ ಮಾಡುತ್ತಿದೆ. ಅರ್ಜಿ ಸಲ್ಲಿಸಿದ 35 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ ಎಂದರು. ಜೊತೆಗೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಕಾರ್ಕಳ ತಾಲೂಕು ಡಿ. ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.