ಕಾರ್ಕಳ ಜ್ಞಾನಸುಧಾ ಕಾಲೇಜಿನಲ್ಲಿ ‘ವಿದ್ಯಾರ್ಥಿ ಮಿತ್ರ’ ಸಿ.ಇ.ಟಿ ಅರ್ಜಿ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಉಡುಪಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ ವಿಭಾಗ) ಉಡುಪಿ ಜಿಲ್ಲೆ, ಇವರ ಸಂಯುಕ್ತ ಆಶ್ರಯದಲ್ಲಿ “ವಿದ್ಯಾರ್ಥಿ ಮಿತ್ರ” ಸಿ.ಇ.ಟಿ. ಅರ್ಜಿ- 2024, ಇದನ್ನು ತುಂಬುವ ವಿಷಯದಲ್ಲಿ ತರಬೇತಿ ಕಾರ್ಯಕ್ರಮವು ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು.

ಉಡುಪಿ ಜಿಲ್ಲೆಯ ಖಾಸಗಿ, ಅನುದಾನಿತ, ಸರ್ಕಾರಿ, ಸಿ.ಬಿ.ಎಸ್.ಇ ಹಾಗೂ ಐ.ಸಿ.ಎಸ್.ಇ 11 ಮತ್ತು 12ನೇ ತರಗತಿಯ ವಿಜ್ಞಾನ ವಿಷಯದ ಎಲ್ಲಾ ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಆಯೋಜಿಸಿದ ತರಬೇತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಮಾರುತಿಯವರು ಉದ್ಘಾಟಿಸಿದರು.

ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಾಗ ಮಾಡುವ ತಪ್ಪುಗಳ ಪರಿಣಾಮವನ್ನು ಮನದಟ್ಟು ಮಾಡಿ ಶಿಕ್ಷಕರು ಮಕ್ಕಳನ್ನು ತರಬೇತಿಗೊಳಿಸುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ, ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದುದು. ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದು ಅವರ ಬಾಳಿಗೆ ಬೆಳಕಾದಲ್ಲಿ ಮಕ್ಕಳು ಮುಂದೆ ಸಮಾಜಕ್ಕೆ ದಾರಿ ದೀಪವಾಗುತ್ತಾರೆ ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸಕರಾದ ಶ್ರೀ ಪಿ.ಕೇಶವ, ಅನಿಲ್ ಕುಮಾರ್, ಡಾ.ಅರುಣ್, ಡಾ.ಶ್ರೀಕಾಂತ್, ಡಾ.ಸಹನಾ, ಡಾ.ವಿಶಾಲಾಕ್ಷಿ, ಶ್ರೀಮತಿ ಪ್ರಿಯಕಾರಿಣಿ, ಶ್ರೀಮತಿ ಪೂರ್ಣಿಮ ಭಾಗವಹಿಸಿದರು.

ಅನುದಾನಿತ ಮತ್ತು ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ, ಸಂಸ್ಥೆಯ ಸಿಇಒ ಹಾಗೂ ಪ್ರಾಂಶುಪಾಲ ದಿನೇಶ್.ಎಂ.ಕೊಡವೂರ್ ಸ್ವಾಗತಿಸಿ, ಕು. ಶಮಿತಾ ನಿರೂಪಿಸಿ, ಸಂತೋಷ ನೆಲ್ಲಿಕಾರು ಪ್ರಾರ್ಥಿಸಿದರು.