ಕಾರ್ಕಳ: ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರೂ. ವಂಚನೆ ಪ್ರಕರಣ: ಮೂವರು ಆರೋಪಿಗಳ ಬಂಧನ.

ಕಾರ್ಕಳ: ಎಟಿಎಂ ಕಾರ್ಡ್ ಅನ್ನು ಬದಲಾಯಿಸಿ ಒಂದು ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ಪ್ರಕರಣವನ್ನು ಭೇದಿಸಿ ಮೂವರು ಅಂತರರಾಜ್ಯ ಕುಖ್ಯಾತ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು, ಮಹಾರಾಷ್ಟ್ರ ಸೋಲಾಪುರದ ಕೇದಾರನಾಥ ನಗರದ ಶ್ರವಣ್ ಸತೀಶ ಮಿನಜಗಿ(27), ಸೋಲಾಪುರ ತಾಲೂಕಿನ ಕುಮ್ಮಾನಗರದ ಇಂದಿರಾ ನಗರದ ಪ್ರದೀಪ ಮಾರುತಿ ಇಂಗ್ಲೆ(27), ಪುಣೆ ಜಿಲ್ಲೆಯ ಇಂದಾಪುರ ತಾಲೂಕಿನ ವನಗಲ್ಲಿಯ ಕಿರಣ್ ಬಾಲು ಚೌಹಾನ್ (28). ನಾಲ್ಕನೆ ಆರೋಪಿ ಪತ್ತೆಗಾಗಿ ಅಜೆಕಾರು ಪೊಲೀಸರು ಬಲೆಬೀಸಿದ್ದಾರೆ. ಬಂಧಿತ ಮೂವರು ಕಳ್ಳರ ಮೇಲೆ ವಿವಿಧ ಠಾಣೆಗಳಲ್ಲಿ 70ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

ಅಜೆಕಾರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯ ಪಿಎಸ್‌ಐ ಶುಭಕರ, ಸಿಬ್ಬಂದಿಯವರೊಂದಿಗೆ ಮಂಗಳವಾರ ಮರ್ಣೆ ಗ್ರಾಮದ ಕಾಡುಹೊಳೆ ಪೊಲೀಸ್ ಚೆಕ್‌ಪೋಸ್ಟ್ ಬಳಿ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ 4,00,000 ಮೌಲ್ಯದ ಕಾರು, ಮೊಬೈಲ್ ಫೋನ್‌ಗಳು-3, ವಿವಿಧ ಬ್ಯಾಂಕ್‌ಗಳ ಒಟ್ಟು 52 ಎಟಿಎಂ ಕಾರ್ಡ್‌ಗಳು ಸೇರಿದಂತೆ ಒಟ್ಟು 4,85,000 ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಅಜೆಕಾರು ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಏನಿದು ಪ್ರಕರಣದ:
ಸೆ.16 ರಂದು ಸಂಜೆ ಬೊಂಡುಕುಮೇರಿ ನಿವಾಸಿ ಹೆನ್ರಿ ಡಿ’ಸೋಜಾ ಅವರು ಅಜೆಕಾರು ಪೇಟೆಯಲ್ಲಿರುವ ಎಟಿಎಂನಿಂದ ಹಣ ಡ್ರಾ ಮಾಡಲು ತೆರಳಿದ್ದಾರೆ. ಈ ವೇಳೆ ಆರೋಪಿಗಳು ಅವರ ಗಮನವನ್ನು ಬೇರೆಡೆ ಸೆಳೆದು ಮೋಸದಿಂದ ಅವರ ಎಟಿಎಂ ಕಾರ್ಡನ್ನು ಬದಲಾವಣೆ ಮಾಡಿ ಅವರಿಗೆ ಬೇರೆ ಕಾರ್ಡ್ ಕೊಟ್ಟಿದ್ದಾರೆ. ಬಳಿಕ ಅವರ ಕಾರ್ಡ್ ನಿಂದ ಕಾರ್ಕಳದ ಎಟಿಎಂನಲ್ಲಿ 1 ಲಕ್ಷ ರೂಪಾಯಿಯನ್ನು ಡ್ರಾ ಮಾಡಿದ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಸೆ. 17ರಂದೂ ಕಾರ್ಕಳ ತಾಲೂಕಿನ ಜೋಡುರಸ್ತೆಯ ಎಟಿಎಂ ನಲ್ಲಿಯು ಹಣ ಎಗರಿಸಿದ ಎರಡನೇ ಪ್ರಕರಣವು ದಾಖಲಾಗಿತ್ತು.