ಕಾರ್ಕಳ: ಕಾರ್ಕಳ ಸಾಣೂರು ಗ್ರಾಮದ ಮುರತಂಗಡಿ ಕಮಲಾಕ್ಷ ನಗರ ಎಂಬಲ್ಲಿ ಮುಸ್ಲಿಮರ ಬಗ್ಗೆ ಅವಹೇಳನಕಾರಿಯಾಗಿ ಬ್ಯಾನರ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕಾರ್ಕಳ ಪೊಲೀಸರು ಸೆ.3ರಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬ್ಯಾನರ್ನಲ್ಲಿ ಹೆಸರು ಉಲ್ಲೇಖಿಸಿದ್ದ ಸ್ಥಳೀಯ ನಿವಾಸಿ ಸತೀಶ್ ದೇವಾಡಿಗ ಹಾಗೂ ಬ್ಯಾನರ್ ಮುದ್ರಿಸಿದ ಕಾರ್ಕಳ ಮಾರ್ಕೆಟ್ ರಸ್ತೆಯಲ್ಲಿರುವ ಅಮೂಲ್ಯ ಗ್ರಾಫಿಕ್ಸ್ನ ಮಾಲಕಿ ಪುಷ್ಪಲತಾ ಎಂದು ಗುರುತಿಸಲಾಗಿದೆ.
ಮುಸ್ಲಿಮರ ಬಗ್ಗೆ ಅವಹೇಳನಕಾರಿ ಬರಹಗಳೊಂದಿಗೆ ಹಾಕಲಾದ ಬ್ಯಾನರ್ ಸೆ.2ರಂದು ಪ್ರತ್ಯಕ್ಷವಾಗಿದ್ದು, ಇದರಲ್ಲಿ ಸತೀಶ್ ದೇವಾಡಿಗ ತನ್ನ ಹೆಸರು ಹಾಗೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬರೆದುಕೊಂಡಿದ್ದನು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಪೊಲೀಸರು ಆರೋಪಿಗಳಾದ ಸತೀಶ್ ದೇವಾಡಿಗ ಹಾಗೂ ಪುಷ್ಪಲತಾರನ್ನು ಬಂಧಿಸಿ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇವರ ಪೈಕಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದ್ದು, ಪುಷ್ಪಲತಾಳನ್ನು ಷರತ್ತು ಬದ್ಧ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದುಬಂದಿದೆ.












