ಕಾರ್ಕಳ ಅತ್ಯಾಚಾರ ಪ್ರಕರಣ: ಬಂಧಿತ ಇಬ್ಬರು ಆರೋಪಿಗಳು ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ: ಉಡುಪಿ ಎಸ್ಪಿ

ಕಾರ್ಕಳ: ಕಾರ್ಕಳ ಅಯ್ಯಪ್ಪ ನಗರದ ಯುವತಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟು ನ್ಯಾಯಾಂಗ ಬಂಧನದಲ್ಲಿದ್ದ ಅಲ್ತಾಫ್ ಹಾಗೂ ಶ್ರಾವೆದ್ ರಿಚರ್ಡ್‌ ಕ್ವಾಡ್ರಸ್‌ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಉಡುಪಿ ಎಸ್‌.ಪಿ. ಡಾ.ಅರುಣ್‌ಕುಮಾರ್‌ ತಿಳಿಸಿದ್ದಾರೆ.

ಆರೋಪಿಗಳನ್ನು ಶನಿವಾರ ಕಾರ್ಕಳದಲ್ಲಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಈ ಸಂದರ್ಭ ನಗರ ಠಾಣೆ ಪೊಲೀಸರ ಮನವಿಯಂತೆ ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳನ್ನು ಪೊಲೀಸರು ಶನಿವಾರ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದರು. ಸ್ಥಳದಲ್ಲಿ ಬಿಯರ್‌ ಬಾಟಲಿ, ನೀರಿನ ಬಾಟಲಿ ಮತ್ತಿತರ ವಸ್ತುಗಳು ಕಂಡುಬಂದಿವೆ.

ಮಗ ಅತ್ಯಾಚಾರ ಎಸಗಿದ ಬಗ್ಗೆ ಮಾಹಿತಿಯಿಲ್ಲ:
ಅಲ್ತಾಫ್ ತಾಯಿ ಮಗ ಟಿಪ್ಪರ್‌ ವಾಹನ ಹೊಂದಿದ್ದು, ಮರಳು ವ್ಯವಹಾರ ಮಾಡುತ್ತಿದ್ದ. ಆತನಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಬೆಳಗ್ಗೆ ಮನೆಯಿಂದ ಹೋದರೆ ರಾತ್ರಿ 10 -12 ಗಂಟೆಗೆ ಮರಳುತ್ತಿದ್ದ. ಆತ ಅತ್ಯಾಚಾರ ಎಸಗಿದ್ದ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಆರೋಪಿ ಅಲ್ತಾಫ್ನ ತಾಯಿ ಅಯಿಷಾ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಲ್ತಾಫ್ ಮೊದಲು ದುಃಶ್ಚಟ ಹೊಂದಿರಲಿಲ್ಲ. ಸ್ನೇಹಿತರ ಜತೆ ಸೇರಿ ಕೆಟ್ಟ ಹವ್ಯಾಸ ಬೆಳೆಸಿಕೊಂಡಿದ್ದಾನೋ ಗೊತ್ತಿಲ್ಲ. ಆತ ಡ್ರಗ್ಸ್‌ ತೆಗೆದುಕೊಳ್ಳುತ್ತಿದ್ದ ಬಗ್ಗೆಯೂ ನಮಗೆ ಮಾಹಿತಿಯಿಲ್ಲ ಎಂದು ಆತನ ಸಹೋದರ ತಿಳಿಸಿದ್ದಾರೆ.