ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಕರ್ವಾಲು ವಿಷ್ಣುಮೂರ್ತಿ ದೇವಾಲಯಕ್ಕೆ ಖ್ಯಾತ ಕ್ರಿಕೆಟಿಗ ರವಿಶಾಸ್ತ್ರಿ ಅವರು ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಅರ್ಪಣೆ ಮಾಡಲಾಯಿತು. ಬಳಿಕ ವಿಷ್ಣುಮೂರ್ತಿ ದೇವರಿಗೆ ಮಹಾಪೂಜೆ ಸಲ್ಲಿಸಲಾಯಿತು. ತಮ್ಮ ಸಂಬಂಧಿಗಳಾದ ಸಂತೋಷ್ ಶಾಸ್ತ್ರಿ, ಕವಿತಾ ಶಾಸ್ತ್ರೀ ಹಾಗೂ ಕುಟುಂಬದವರೊಂದಿಗೆ ರವಿ ಶಾಸ್ತ್ರಿ ಆಗಮಿಸಿದ್ದರು.
ಅವರು 2007 – 2025ರ ವರೆಗೆ ಒಟ್ಟು ಹದಿಮೂರು ಬಾರಿ ಕರ್ವಾಲು ದೇವಸ್ಥಾನಕ್ಕೆ ಆಗಮಿಸಿ ನಾಗನಿಗೆ ಪೂಜೆ ಸಲ್ಲಿಸಿದ್ದಾರೆ. ಶಾಸ್ತ್ರಿಯವರ ಪೂರ್ವಜರು ಎರ್ಲಪಾಡಿಯ ಕರ್ವಾಲುಗೆ ಸೇರಿದವರಾಗಿದ್ದು, ಐವತ್ತರ ದಶಕದಲ್ಲಿ ರವಿಶಾಸ್ರಿಯವರ ಅಜ್ಜ ,ಎಂ ವಿ ಶಾಸ್ತ್ರಿ ಮಂಗಳೂರಿನ ಪ್ರಸಿದ್ಧ ವೈದ್ಯರಾಗಿದ್ದರು. ಬಳಿಕ ರವಿಶಾಸ್ರಿಯ ತಂದೆ ಜಯದ್ರಥ ಶಾಸ್ತ್ರಿ ಅಂದಿನ ಮದ್ರಾಸ್ ನಲ್ಲಿ ಶಿಕ್ಷಣ ಮುಗಿಸಿ ಮುಂಬಯಿ ನಲ್ಲಿ ಡಾಕ್ಟರ್ ಆಗಿದ್ದರು. ಬಳಿಕ ರವಿ ಶಾಸ್ತ್ರಿ ಅವರು ಮುಂಬಯಿನಲ್ಲೆ ಹುಟ್ಟಿ ಬೆಳೆದು ಅಲ್ಲೇ ಶಿಕ್ಷಣ ಪಡೆದು ದೇಶದ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾದರು.
ಹದಿನಾಲ್ಕು ವರ್ಷಗಳ ಹಿಂದೆ ಪತ್ನಿ ಸಮೇತ ಸ್ಥಳಕ್ಕೆ ಭೇಟಿ ನೀಡಿ ನಾಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಮಗಳು ಅಲೈಕಾ ಹುಟ್ಟಿದ ಬಳಿಕ ಇಲ್ಲಿಗೆ ನಿರಂತರ ಭೇಟಿ ನೀಡುತ್ತಿದ್ದಾರೆ. ಅಂದಿನಿಂದ ವಾರ್ಷಿಕವಾಗಿ ದೇವಸ್ಥಾನ ಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡುತ್ತಿದ್ದಾರೆ.












