ಕಾರ್ಕಳದಲ್ಲಿ ಅತ್ಯಾಚಾರ ಪ್ರಕರಣ: ಅತ್ಯಾಚಾರ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ: ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹ

ಉಡುಪಿ: ಕಾರ್ಕಳದಲ್ಲಿ ಯುವತಿಯೋರ್ವಳ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಕೂಡಲೇ ಭೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಕ್ರಮಕ್ಕೆ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಶ್ಲಾಘನೆ ವ್ಯಕ್ತಪಡಿಸಿದ್ದು, ಬಂಧನಕ್ಕೊಳಗಾದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗುವಂತೆ ಆಗ್ರಹಿಸಿದ್ದಾರೆ.

ಯುವತಿಯೋರ್ವಳಿಗೆ ಮದ್ಯದಲ್ಲಿ ಅಮಲು ಪದಾರ್ಥವನ್ನು ಬೆರೆಸಿ ಆಕೆಗೆ ಕುಡಿಯಲು ನೀಡಿ ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿರುವ ಘಟನೆಯನ್ನು ನಾಗರಿಕ ಸಮಾಜ ಒಪ್ಪುವಂತದ್ದಲ್ಲ. ಇದು ಖಂಡನೀಯವಾಗಿದೆ. ಯುವತಿಯ ಅತ್ಯಾಚಾರವು ಮಾನವ ಸಮುದಾಯದ ಮೇಲೆ ನಡೆದಂತಹ ಅತ್ಯಾಚಾರ. ಇದನ್ನು ಖಂಡಿತವಾಗಿಯೂ ಸಹಿಸಲು ಸಾಧ್ಯವಿಲ್ಲ.

ಇಂತಹ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ನಡೆದಿರುವುದು ಅತ್ಯಂತ ನಾಚಿಕೆ ಗೇಡು. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯ ಶ್ಲಾಘನೀಯ ಕೇವಲ ಒಂದೇ ಗಂಟೆಯಲ್ಲಿ ಆರೋಪಿಯನ್ನು ಪತ್ತೆ ಹಚ್ಚಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಮತ್ತು ಪೊಲೀಸ್ ಇಲಾಖೆ ಸರಿಯಾದ ತನಿಖೆ ನಡೆಸಬೇಕು. ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎನ್ನುವುದನ್ನು ಪತ್ತೆ ಹಚ್ಚಿ ಎಲ್ಲಾ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಸಂತ್ರಸ್ತ ಯುವತಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಕಾಂಗ್ರೆಸ್ ಪಕ್ಷ ಸದಾ ಆಕೆಯ ಕುಟುಂಬದೊಂದಿಗೆ ನಿಲ್ಲಲಿದೆ ಎಂದರು.

ಸುದ್ದಿಗಳನ್ನು ಹರಿಯಬಿಟ್ಟವರ ವಿರುದ್ಧ ಕ್ರಮ:

ಹಾಗೆಯೇ ಪ್ರಕರಣದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಸುದ್ದಿಗಳನ್ನು ಹರಿಯಬಿಟ್ಟು ಕೋಮು ಭಾವನೆಗಳನ್ನು ಕೆರಳಿಸುವ ಕೃತ್ಯದಲ್ಲಿ ತೊಡಗಿರುವುದು, ಈ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವವರ ವಿರುದ್ದ ಪೊಲೀಸ್ ಇಲಾಖೆ ಗಮನ ಹರಿಸಿ ಅಂತಹ ವ್ಯಕ್ತಿಗಳ ವಿರುದ್ದ ಕಠಿಣ ಕ್ರಮವನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಶಾಂತಿ ಸೌಹಾರ್ಧತೆಯನ್ನು ಕಾಪಾಡುವಂತೆ ಅವರು ಇಲಾಖೆಯನ್ನು ಆಗ್ರಹಿಸಿದ್ದಾರೆ.