ಉಡುಪಿ: ಕಾಪು ಕ್ಷೇತ್ರದಲ್ಲಿ ವ್ಯಾಪಾರೀಕರಣಕ್ಕೆ ಉತ್ತೇಜನ ನೀಡುವ ಕೆಲಸ ಆಗುತ್ತಿದೆ. ತನ್ನದೇ ಆದ ಗುತ್ತಿಗೆದಾರರಿಗೆ ಹಣ ಮಂಜೂರು ಮಾಡಿಸುವುದು. ಬಂದರು, ಕೈಗಾರಿಕೆಗಳು ಬರುವ ಜಾಗದಲ್ಲಿ ಆಸ್ತಿ ವೃದ್ಧಿಸುವ ಕೆಲಸವನ್ನು ಕಾಪು ಶಾಸಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಅವರ ಹೇಳಿಕೆಗೆ ಉಡುಪಿಯಲ್ಲಿ ಇಂದು ತಿರುಗೇಟು ನೀಡಿದ ಅವರು, ಬರೇ ವಚನದಾನದಿಂದ ಅಥವಾ ಸಂವಿಧಾನದ ಎದುರು ಕುಣಿತ ಭಜನೆ ಮಾಡುವುದರಿಂದ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಾಸಕರಿಗೆ ಬರುವಂತಹ ನಿಧಿ ವರ್ಷಕ್ಕೆ ಎರಡು ಕೋಟಿ ರೂ., ಕಳೆದ ವರ್ಷ ಅದು ಬಿಡುಗಡೆಯಾಗಿದೆ. ಈ ವರ್ಷವೂ ಪ್ರಥಮ ಹಂತದಲ್ಲಿ 55ಲಕ್ಷ ರೂ. ಬಿಡುಗಡೆ ಆಗಿದೆ. ಅದೇ ರೀತಿಯಲ್ಲಿ ಸ್ವಂತ ವ್ಯಾಪರಗೋಸ್ಕರ ಇರುವಂತಹ ಅನುದಾನಗಳು ಬಿಡುಗಡೆಯಾಗುತ್ತಿವೆ. ಕಡಲಿಗೆ ಕಲ್ಲು ಹಾಕುವುದು. ಹಿಂದೆ ಹಾಕಿರುವುದು. ಅದಕ್ಕಾಗಿ ಸುಮಾರು ಹತ್ತು ಕೋಟಿ ರೂ. ಅನುದಾನ ರಿಲೀಸ್ ಆಗಿದೆ. ಒಂದು ಪಂಚಾಯತ್ ನಲ್ಲಿ ಮುನ್ನೂರರಿಂದ ನಾಲ್ನೂರು ಮನೆ ನಿವೇಶನದ ಅರ್ಜಿಗಳು ಬಾಕಿ ಇವೆ. ಕಳೆದ ಐದು ವರ್ಷದಲ್ಲಿ ಒಂದು ನಿವೇಶನ ಕೊಟ್ಟಿಲ್ಲ. ಇದೀಗ ಒಂದು ಕಾಲು ವರ್ಷ ಆಗುತ್ತಾ ಬಂತು. ಅದರ ಬಗ್ಗೆ ಒಂದು ಶಬ್ದ ಕೂಡ ಶಾಸಕರು ತೆಗೆಯುತ್ತಿಲ್ಲ. ಎಲ್ಲೂರು ಐಟಿ ಕಾಲೇಜಿಗೆ ಐದು ಕೋಟಿ ಅನುದಾನ ಬಂದು ಆರು ವರ್ಷ ಆಯ್ತು. ಇನ್ನೂ ಕೂಡ ಜಾಗದ ಮಂಜೂರಾತಿ ಆಗಿಲ್ಲ. ಅದೇ ರೀತಿ ಶಾಸಕರ ಇಚ್ಛಾಶಕ್ತಿಯ ಕೊರತೆಯಿಂದ ಬೇರೆ ಬೇರೆ ಅನುದಾನಗಳು ಬರುತ್ತಿಲ್ಲ. ಉಳಿದ ಯಾವ ಶಾಸಕರೂ ಅನುದಾನ ಬರುತ್ತಿಲ್ಲ ಅಂತಾ ಹೇಳುತ್ತಿಲ್ಲ ಎಂದು ತಿರುಗೇಟು ನೀಡಿದರು.ಸುಝ್ಲಾನ್ ನಲ್ಲಿ ವ್ಯಾಪಕವಾಗಿ ಸರಕಾರಿ ಜಾಗ ಮಾರಾಟ ಮಾಡಿದಾಗಲೂ ಶಾಸಕರು ಚಕರವೆತ್ತಿಲ್ಲ. ರಸ್ತೆಗಳು ಹದಗೆಟ್ಟಿವೆ. ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಕಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚುನಾವಣೆಗೆ ನಿಂತು ಡೆಪಾಸಿಟ್ ಕಳೆದುಕೊಂಡ ವ್ಯಕ್ತಿ: ಬಿಜೆಪಿ ಜಿಲ್ಲಾಧ್ಯಕ್ಷರಾಗಿರುವ ಕಿಶೋರ್ ಕುಮಾರ್ ಕುಂದಾಪುರ ಚುನಾವಣೆಗೆ ನಿಂತು ಡೆಪಾಸಿಟ್ ಕಳೆದುಕೊಂಡ ವ್ಯಕ್ತಿ. ನಾನು ಒಂದು ಬಾರಿ ಲೋಕಸಭೆ ಸದಸ್ಯನಾಗಿದ್ದೆ. ಮೂರು ಬಾರಿ ಶಾಸಕನಾಗಿದ್ದೆ. ಒಂದು ಬಾರಿ ಮಂತ್ರಿಯಾಗಿದ್ದೆ. ಅವರಿಗೆ ನನ್ನ ರಾಜಕೀಯ ನಿವೃತ್ತಿ ಕೇಳುವ ನೈತಿಕತೆ ಎಲ್ಲಿದೆ ಎಂದು ತಿರುಗೇಟು ನೀಡಿದರು.