ಉಡುಪಿ: ಕೇಂದ್ರ ಸರಕಾರದ ಬೆಲೆ ಏರಿಕೆ, ವಕ್ಫ್ ಕಾಯ್ದೆಗೆ ತಿದ್ದುಪಡಿ, ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲಿಸಲು ಯತ್ನಿಸುತ್ತಿರುವ ಷಡ್ಯಂತ್ರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳು ಜೊತೆಗೂಡಿ ಗುರುವಾರ ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಪ್ರತಿಭಟನಾ ಸಭೆಗೂ ಮೊದಲು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಳದಿಂದ ಕಾಪು ಪೇಟೆಯವರೆಗೆ ಮೆರವಣಿಗೆ ನಡೆಸಲಾಯಿತು. ಪಕ್ಷದ ನಾಯಕರು ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಹಿತ ಸಾವಿರಾರು ಮಂದಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಿಜೆಪಿಯ ದಮನಕಾರಿ ಪ್ರವೃತ್ತಿಯ ವಿರುದ್ಧ ದಿಕ್ಕಾರ ಕೂಗಿದರು. ಯುವ ಕಾಂಗ್ರೆಸ್ ಕಾರ್ಯಕರ್ತರು ಎತ್ತಿನಗಾಡಿ ಎಳೆಯುವ ಮೂಲಕ ಕೇಂದ್ರ ಸರಕಾರದ ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಕೇಂದ್ರ ಸರಕಾರ ಕೋವಿಡ್ ಸಂದರ್ಭದಲ್ಲಿ ಸಬ್ಸಿಡಿಗಳನ್ನು ರದ್ದುಗೊಳಿಸಿ, ಜಿಎಸ್ ಟಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಮೂಲಕ ಬಡವರ, ಜನಸಾಮಾನ್ಯರ ರಕ್ತ ಹೀರುವ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಸಂಗ್ರಹ ಮಾಡುವ ಜಿಎಸ್ ಟಿ ತೆರಿಗೆಯನ್ನು ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಿಗೆ ಹಂಚಿಕೆ ಮಾಡುತ್ತಿದೆ. ಮೇಕದಾಟು ಯೋಜನೆ, ನಮ್ಮ ನೆಲ ಜಲ ಭಾಷೆ ಎಲ್ಲದಕ್ಕೂ ವಿರೋಧ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಪಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿರುವ ಪಹಲ್ಗಾಮ್ ಪ್ರದೇಶಕ್ಕೆ ಪ್ರತಿದಿನ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಂತಹ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯನ್ನು ಯಾಕೆ ನೇಮಕ ಮಾಡಿಲ್ಲ ಎನ್ನುವುದಕ್ಕೆ ಕೇಂದ್ರ ಸರಕಾರ ಉತ್ತರಕೊಡಬೇಕು. ತಾಯಂದಿರ ಸೌಭಾಗ್ಯವನ್ನು ಕಿತ್ತುಕೊಂಡ ಕೇಂದ್ರ ಸರಕಾರಕ್ಕೆ ದಿಕ್ಕಾರ. ನಿಮ್ಮ ಬೇಜಬ್ದಾರಿಯಿಂದಲೇ ಇಂತಹ ಘಟನೆ ನಡೆದಿದೆ ಎಂದು ಗುಡುಗಿದರು.
ಕಾಂಗ್ರೆಸ್ ಪಾಲಿಸಿ ಅನ್ನ ಮೂಲದ್ದು, ಆದರೆ ಬಿಜೆಪಿ ಪಾಲಿಸಿ ಕನ್ನ ಮೂಲದ್ದು. ಕೇಂದ್ರ ಸರಕಾರ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸಾಮಾನ್ಯ ಜನರನ್ನು ಲೂಟಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮನ್ ವಿರುದ್ಧ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಜನಾಕ್ರೋಶ ರ್ಯಾಲಿ ನಡೆಸಿರುವ ಜಿಲ್ಲೆಯ ಎಲ್ಲ ಶಾಸಕರಿಗೆ ಅಭಿನಂದನೆಗಳು ಎಂದರು.
ಜೂನ್ 5ರೊಳಗೆ ಒಂದು ಗ್ರಾಂ ಚಿನ್ನದ ಬೆಲೆ 1ಲಕ್ಷದ 7 ಸಾವಿರ ರೂ. ಆಗಲಿದೆ. ಒಂದು ವೇಳೆ ಆಗದಿದ್ದರೆ ನಾನು ಸಾರ್ವಜನಿಕ ಜೀವನದಲ್ಲಿ ಮಾತನಾಡುವುದನ್ನು ಬಿಡುತ್ತೇನೆ ಎಂದು ಸವಾಲು ಹಾಕಿದರು.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಹಿಂದೂ ಮುಸ್ಲಿಂರಲ್ಲಿ ವಕ್ಫ್ ಭೂಮಿಗಾಗಿ ಜಗಳ ನಡೆದಿಲ್ಲ. ಯಾವುದೇ ಪ್ರಕರಣಗಳು ಬಾಕಿಲ್ಲ. ಹಾಗಿದ್ದರೆ ಈ ಕಾಯ್ದೆಯನ್ನು ಯಾಕೆ ಜಾರಿಗೊಳಿಸಿದ್ದೀರಿ ಎಂದು ಪ್ರಶ್ನಿಸಿದರು.












