ಕಾಪು: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಪರಿಚಯ ಮಾಡಿಕೊಂಡು ಅತ್ಯಾಚಾರ ನಡೆಸಿ 2 ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಪೋಕ್ಸೋ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿ ವಿಜಯನಗರ ಜಿಲ್ಲೆಯ ಹಟ್ಟಿ ಚಿರಾತಗುಂದ ನಿವಾಸಿ ಚೇತನ್ ಯಾನೆ ತಿಪ್ಪೇಶ್. ಈತ ಕಳೆದ ವರ್ಷ ಅ.15ರಿಂದ 25ರ ನಡುವಿನ ಅವಧಿಯಲ್ಲಿ ಶಂಕರಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಾಲಕಿಯನ್ನು ಪರಿಚಯ ಮಾಡಿಕೊಂಡು, ದೈಹಿಕ ಸಂಪರ್ಕ ನಡೆಸಿ ಗರ್ಭಿಣಿಯನ್ನಾಗಿಸಿದ್ದು, ಎರಡು ತಿಂಗಳ ನಂತರ ಮನೆಯವರಿಗೆ ವಿಚಾರ ತಿಳಿದು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಶಿವಮೊಗ್ಗ ಸುರಭಿ ಉಜ್ವಲ ಕೆಂದ್ರಕ್ಕೆ ಬಾಲಕಿಯನ್ನು ದಾಖಲಿಸಲಾಗಿತ್ತು. ಶಿರಾಳಕೊಪ್ಪ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಕಾಪು ಠಾಣೆಗೆ ವರ್ಗಾಯಿಸಿದ್ದು, ನೊಂದ ಬಾಲಕಿಯ ಹೇಳಿಕೆಯಂತೆ 2024ರ ಮಾ. 19ರಂದು ಚೇತನ್ ಯಾನೆ ತಿಪ್ಪೇಶ್ನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ ಆರೋಪಿ ತಲೆಮರೆಸಿಕೊಂಡಿದ್ದ. ಆರೋಪಿಯ ಜಾಡು ಹಿಡಿದ ಕಾಪು ಠಾಣೆಗೆ ಸಿಬ್ಬಂದಿ ನಾರಾಯಣ ಮತ್ತು ರುಕ್ಮಯ ಅವರು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಮತ್ತು ಎಸ್ಐ ಅಬ್ದುಲ್ ಖಾದರ್ ಅವರ ಸೂಚನೆಯಂತೆ ವಿಜಯನಗರಕ್ಕೆ ಬಳಿಕ ಬಳ್ಳಾರಿಗೆ ತೆರಳಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗೆ ನ್ಯಾಯಾಲಯವು ಜೂ. 20ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಕಾಪು ಪೊಲೀಸರ ಕಾರ್ಯಾಚರಣೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.