ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ನಿಶ್ಚಿತ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ದಕ್ಷಿಣ ಕನ್ನಡ – ಉಡುಪಿ ಸ್ಥಳೀಯ ಸಂಸ್ಥೆಗಳ ಕರ್ನಾಟಕ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲುವು ಶತಸಿದ್ಧ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ಚುನಾವಣಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವು ನಿಶ್ಚಿತ. ಕರಾವಳಿಯಲ್ಲಿ ಪಕ್ಷದ ಅಭ್ಯರ್ಥಿ ರಾಜು ಪೂಜಾರಿ ಪರ ಒಲವು ಇದೆ. ಗೆಲುವಿಗೆ ಉತ್ತಮ ವಾತಾವರಣವಿದೆ. ಅದಕ್ಕಾಗಿ ಪಕ್ಷದ ನಾಯಕರು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ಜನಪರ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇವೆ. ಮತದಾರರು ಕೂಡ ಕಾಂಗ್ರೆಸ್‌ ಪಕ್ಷದ ಯೋಜನೆಗಳ ಬಗ್ಗೆ ವಿಶ್ವಾಸವಿಟ್ಟಿದ್ದಾರೆ. ಪಂಚ ಗ್ಯಾರಂಟಿ ಯೋಜನೆಗಳು ನಮ್ಮನ್ನು ಕೈ ಬಿಡುವುದಿಲ್ಲ. ಪ್ರತಿ ಪಂಚಾಯತಿಗೆ ಎರಡು ಕೋಟಿ ಅನುದಾನ ತರಲು ಉದ್ಯೋಗ ಖಾತ್ರಿ ಸಹಕಾರಿಯಾಗಿದೆ. ಇದನ್ನು ಜಾರಿಗೆ ತಂದ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಬಿಜೆಪಿಯವರು ಏನೇ ಮಾಡಿದರೂ ನಮ್ಮ ಅಭ್ಯರ್ಥಿ ರಾಜು ಪೂಜಾರಿ ಗೆದ್ದೇ ಗೆಲ್ಲುವರು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.