ಉಡುಪಿ: ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಬೈಂದೂರು ತಾಲೂಕಿನ ಜಡ್ಕಲ್ ಮುದೂರು ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಧರಣಿ ನಡೆಸಿದರು.
ಸಾವಿರಾರು ಸಂಖ್ಯೆ ಸೇರಿದ್ದ ಜನರು ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅವೈಜ್ಞಾನಿಕ ವರದಿಯಿಂದಾಗಿ ಜನವಸತಿ ಪ್ರದೇಶಗಳು ಪರಿಸರ ಅತೀ ಸೂಕ್ಷ್ಮ ಅರಣ್ಯ ವ್ಯಾಪ್ತಿಗೆ ಒಳಪಡುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ. ಜಿಲ್ಲೆಯ ಸುಮಾರು 37ಕ್ಕೂ ಅಧಿಕ ಗ್ರಾಮಗಳು ಈ ವರದಿಯ ಅತೀ ಸೂಕ್ಷ್ಮ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಹೀಗಾಗಿ ವರದಿಯಿಂದ ಜನವಸತಿ ಪ್ರದೇಶ ಕೈಬಿಡಬೇಕು ಎಂದು ಬಾಧಿತ ಗ್ರಾಮಗಳ ಗ್ರಾಮಸ್ಥರು ಒತ್ತಾಯಿಸಿದರು.
ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಜನಪರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಅವರು, ಕಸ್ತೂರಿ ರಂಗನ್ ವರದಿಯಲ್ಲಿ ಯಾರಿಗೂ ಪರಿಹಾರ ಕೊಡುವ ವ್ಯವಸ್ಥೆಯೇ ಇಲ್ಲ. ನಮ್ಮನ್ನು ಅದರೊಳಗೆ ಸಿಲುಕಿಸಿ ನಾವೇ ಈ ಜಾಗ ಬಿಟ್ಟು ಹೋಗುವಂತೆ ಮಾಡುವ ವರದಿ ಇದಾಗಿದೆ. ಈ ವರದಿಗೆ ವಿರೋಧ ಮಾಡುವವರ ಸಂಖ್ಯೆಗಿಂತ ಸುಳ್ಳು ಪ್ರಚಾರ ಮಾಡಿ ವರದಿ ಜಾರಿ ಮಾಡುವಂತೆ ಹೇಳುವವರ ಶಕ್ತಿ ದೊಡ್ಡದು ಇದೆ. ಈ ಎಲ್ಲ ವಿರೋಧಗಳ ನಡುವೆಯೂ ಈ ವರದಿಯನ್ನು ಜಾರಿ ಮಾಡುವ ಆತಂಕ ಹಾಗೂ ಅನುಮಾನ ನಮ್ಮನ್ನು ಕಾಡುತ್ತಿದೆ ಎಂದರು.
ಕಸ್ತೂರಿರಂಗನ್ ವರದಿ ಸಂಬಂಧ ಈ ಹಿಂದೆ ಐದು ಬಾರಿ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಇದೀಗ ಮತ್ತೆ ಶಿರೂರು ಮತ್ತು ವಯನಾಡಿನ ಭೂಕುಸಿತ ದುರಂತದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆ ಆರನೇ ಬಾರಿಗೆ ನೋಟಿಫಿಕೇಶನ್ ಹೊರಡಿಸಿದೆ. ಆದರೆ ಭೂಕುಸಿತಕ್ಕೂ ಈ ಕಸ್ತೂರಿವರದಿ ರಂಗನ್ ವರದಿಯಲ್ಲಿರುವ ಸಲಹೆಗೂ ಯಾವುದೇ ಸಂಬಂಧ ಇಲ್ಲ. ವಯನಾಡಿನಲ್ಲಿ ಭೂಕುಸಿತ ಆಗಿರುವ ಜಾಗ ಕಸ್ತೂರಿ ರಂಗನ್ ವರದಿಯ ಅನ್ವಯಿಸುವ ಜಾಗದಲ್ಲಿಯೇ ಇಲ್ಲ ಎಂದು ತಿಳಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಜನಪರ ಹೋರಾಟಗಾರ ಜಯನ್ ಮಲ್ಪೆ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಾಸುದೇವ ಮುದೂರು, ಮುದೂರು ಗ್ರಾಪಂ ಸದಸ್ಯ ಲಕ್ಷ್ಮಣ ಶೆಟ್ಟಿ, ಸಮಿತಿಯ ಪ್ರಮುಖರಾಜ ರಂಜಿತ್ ಎಂ.ವಿ.ಮುದೂರು, ಜಿ.ಬಿ.ಮೋಹನ್ ಜಡ್ಕಲ್, ಜೋಯ್ ವಿ.ಜೆ. ಉಪಸ್ಥಿತರಿದ್ದರು.