ಉಡುಪಿ: ಮಾನಸಿಕ ಹಾಗೂ ದೈಹಿಕ ಸಧೃಡತೆಗೆ ಕಳರಿ ಸಮರ ಕಲೆ ಪೂರಕವಾಗಿದೆ. ಈ ಕಲೆಯನ್ನು ಮಕ್ಕಳಿಗೆ ಅಗತ್ಯವಾಗಿ ಕಲಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಕಳರಿಪಟು ಮೀನಾಕ್ಷಿ ಅಮ್ಮ ಹೇಳಿದ್ದಾರೆ.
ಶ್ರೀಕೃಷ್ಣ ಸೇವಾ ಬಳಗದ ಆಶ್ರಯದಲ್ಲಿ ಉಡುಪಿ ಶ್ರೀಪೂರ್ಣ ಪ್ರಜ್ಞ ಸಭಾಂಗಣದಲ್ಲಿ ಆಯೋಜಿಸಿದ ಕಳರಿ ಸಮರ ಕಲೆ ಪ್ರಾತ್ಯಕ್ಷತೆ ಮತ್ತು ಪ್ರದರ್ಶನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಗಾಗಿ ಕಳರಿ ಸಮರ ಕಲೆಯನ್ನು ಅಭ್ಯಸಿಸಬೇಕು. ಇದರಿಂದ ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸಧೃಡರಾಗುತ್ತಾರೆ. ಆದ್ದರಿಂದ ಈ ಕಲೆಯನ್ನು ಕರಾಟೆಯಂತೆ ಶಾಲೆಗಳಲ್ಲಿಯೂ ಕಲಿಸುವ ಕಾರ್ಯ ನಡೆಸಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ ಅವರು, ಮಾದಕ ವಸ್ತುಗಳು ಸಮಾಜದಿಂದ ಮುಕ್ತವಾಗಬೇಕೆಂದು ಹೇಳುತ್ತಿದ್ದರು. ಅದು ಇಂದು ನಮ್ಮ ಮನೆ ಬಾಗಿಲಿಗೆ ಬಂದು ನಿಂತಿದೆ. ಮಕ್ಕಳಿಗೆ ಬುದ್ಧಿ ಹೇಳುವುದರಿಂದ ಇದನ್ನು ನಿವಾರಣೆ ಮಾಡಲು ಸಾಧ್ಯವಿಲ್ಲ. ಮಕ್ಕಳನ್ನು ಬರೇ ಓದಿಗೆ ಸೀಮಿತ ಗೊಳಿಸದೆ, ದೈಹಿಕ ಆರೋಗ್ಯವನ್ನು ಸೃದೃಢಗೊಳಿಸುವ ಚಟುವಟಿಕೆಗಳ ಕಡೆಗೂ ಗಮನಹರಿಸುವಂತೆ ಮಾಡಬೇಕು. ಮಕ್ಕಳಿಗೆ ಕಳರಿ ಸಮರ ಕಲೆಗಳಂತಹ ಕಲೆಗಳನ್ನು ಕಲಿಸುವುದರಿಂದ ಅವರು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬಹುದು. ಸನಾತನ ಧರ್ಮದ ಒಳ್ಳೆಯ ವಿಷಯಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಆಗ ನಮ್ಮ ಹೆಣ್ಣಮಕ್ಕಳು ಮತಾಂತರದಂತಹ ಷಡ್ಯಂತ್ರಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ, ಮಾಣಿಲ ಶ್ರೀಧಾಮದ ಶ್ರೀಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಇನ್ನಾ ರಾಮದಾಸ ಮಡುಮಣ್ಣಾ ಅವರನ್ನು ಗೌರವಿಸಲಾಯಿತು. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಉಪಸ್ಥಿತ ರಿದ್ದರು. ಶ್ರೀಕಾಂತ ಶೆಟ್ಟಿ ಕಾರ್ಕಳ ತೌಳವ ಸಮರ ಪರಂಪರೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಡಾ.ರಾಘವೇಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.