ವಿದ್ಯಾಗಿರಿ: ಮೂಡಣದ ಬಿದಿರೆಯ ನಾಡಲ್ಲಿ ಮೂರು ದಶಕಗಳ ಹಿಂದೆ ಬೆಳಗಿದ ಸಾಂಸ್ಕೃತಿಕ ಬೆಳಕು ಜನಮಾನಸವ ಬೆಸೆದುಕೊಂಡಿದ್ದು, ಈಗ ಮೂವತ್ತರ ಹರುಷ. ಈ ಸಾಂಸ್ಕೃತಿಕ ಬೆಳಕಿನ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವವಾದ 30ನೇ ವರ್ಷದ ‘ಆಳ್ವಾಸ್ ವಿರಾಸತ್’ಗೆ ವಿದ್ಯಾಗಿರಿಯು ವಿದ್ಯುದ್ದೀಪಾಲಂಕಾರ, ಹೂ-ಹಣ್ಣಿನ ಸಿಂಗಾರ, ಗೂಡುದೀಪಗಳ ಬೆಳಕು, ಕಲಾಕೃತಿಗಳ ಮೆರುಗು ಸೇರಿದಂತೆ ಅನನ್ಯತೆ ಹಾಗೂ ಅಚ್ಚರಿಗಳ ಬೆರಗಿನ ಮೂಲಕ ಸಜ್ಜಾಗಿದೆ.
ಇಂದಿನಿಂದ (ಡಿ.10) ಭಾನುವಾರದ ವರೆಗೆ (ಡಿ.15) ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ. ಈ ಬಾರಿ ಡಿ.10 ರಿಂದ 14ರ ವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ ಮಿಂದೇಳಲು ಮೀಸಲಿರಿಸಲಾಗಿದೆ.
ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾಗಿದ್ದರೆ, ಸಮೀಪದ ಕೃಷಿಸಿರಿ, ನೀಟ್ ಕಟ್ಟಡ, ಅರಮನೆ ಮೈದಾನ ಸೇರಿದಂತೆ ಸುತ್ತಲ ಆವರಣದಲ್ಲಿ ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತವೆ.
ಪುಟಾಣಿ- ಶತಾಯುಷಿ ಸೇರಿದಂತೆ ಎಲ್ಲರ ತನು-ಮನ ಸಂತೈಸಲಿದೆ. ತುಳುನಾಡಿನ ಗುತ್ತಿನ ಮನೆಯ ಪರಿಕಲ್ಪನೆಯಲ್ಲಿ ಕೃಷಿಸಿರಿ ಮೇಳಗಳ ಆವರಣವನ್ನು ಸಜ್ಜುಗೊಳಿಸಲಾಗಿದ್ದು, ಈ ಬಾರಿ 650 ಮಳಿಗೆಗಳಿವೆ.
ವಿದ್ಯಾಗಿರಿಯ ಆವರಣದ ತುಂಬಾ ಸುಮಾರು 2.5 ಲಕ್ಷಕ್ಕೂ ಅಧಿಕ ಹೂವಿನಗಿಡಗಳು, 500ಕ್ಕೂ ಹೆಚ್ಚು ಕಲಾಕೃತಿಗಳಿದ್ದು, ವಿರಾಸತ್ ರಾಜಮಾರ್ಗದ ಅಂದವನ್ನೂ ಹೆಚ್ಚಿಸಿವೆ. ಪ್ರಕೃತಿಯ ಮಡಿಲಲ್ಲಿ ಸಿಂಗರಿಸಿ ನಿಂತ ಮದುವಣಗಿತ್ತಿಯಂತೆ ಕೈ ಬೀಸಿ ಕರೆಯುತ್ತಿದೆ.ಅಬಾಲವೃದ್ಧರಾಗಿ ಯಾವುದೇ ಭೇದಭಾವ ಇಲ್ಲದೇ ಎಲ್ಲರೂ ಆಶಾದಾಯಕವಾಗಿ ಕುಟುಂಬ ಸಮೇತ ಸಂಭ್ರಮಿಸಬಹುದಾದ ಅಪೂರ್ವ ಸಾಂಸ್ಕೃತಿಕ ಉತ್ಸವದ ತೆರೆ ಮೆಲ್ಲನೆ ಸರಿದಿದೆ. ಏಕತೆ ಮತ್ತು ಸಮಗ್ರತೆಯನ್ನು ಪ್ರತಿಬಿಂಬಿಸುವ ವೈಭವವನ್ನು ಎಲ್ಲಾ ಪ್ರೇಕ್ಷಕರು 6 ದಿನಗಳ ಕಾಲ ಸವಿಯಬಹುದು.
ಸುಮಾರು 30 ವರ್ಷದಿಂದ ನಡೆಸಿಕೊಂಡು ಬರುತ್ತಿರುವ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಉತ್ಸವ ಎಲ್ಲಾ ಸಂಘಟಕರಿಗೆ, ಕಲಾವಿದರಿಗೆ ಹೊಸ ಸಾಧ್ಯತೆ ಮತ್ತು ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ.
ಕಳೆದ ಆರು ತಿಂಗಳಿಂದ ಸಂಸ್ಥೆಯ ವಿದ್ಯಾರ್ಥಿಗಳು, ಸಿಬ್ಬಂದಿ, ಸರಿಸುಮಾರು 500ಕ್ಕೂ ಹೆಚ್ಚಿನ ಕಾರ್ಮಿಕರು ಡಾ.ಎಂ. ಮೋಹನ ಆಳ್ವ ಅವರ ಮಾರ್ಗದರ್ಶನದಲ್ಲಿ ವಿರಾಸಾತ್‌ನ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.
ರಥಾರತಿ:ಕಳೆದ ಬಾರಿಯಂತೆ ಈ ಬಾರಿಯೂ ರಥ ಸಂಚಾರವು ವಿರಾಸತ್ ವಿಶೇಷವಾಗಿದೆ. ವೇದಘೋಷಗಳು, ಪುಷ್ಪಪಲ್ಲಕ್ಕಿ, ಮಂಗಳ ವಾದ್ಯ ಗಳೊಂದಿಗೆ ಸಾಂಸ್ಕೃತಿಕ ರಥಸಂಚಲನ ಮತ್ತು ರಥಾರತಿ ಜರುಗಲಿದೆ. ಮುಖ್ಯ ವೇದಿಕೆಯ ಮುಂಭಾಗದಲ್ಲಿ ಉದ್ಘಾಟನೆ ಸಂದರ್ಭದಲ್ಲಿ ಸಾಂಸ್ಕೃತಿಕ ರಥವನ್ನು ಎಳೆಯಲಾಗುತ್ತದೆ.
ಈ ರಥದಲ್ಲಿ ಲೋಕ ಮಾರ್ಗದರ್ಶಕರಾದ ಮರ್ಯಾದಾ ಪುರುಷೋತ್ತಮ ರಾಮ ಹಾಗೂ ಜೀವನೋಲ್ಲಾಸ ಕೃಷ್ಣರ ಮೂರ್ತಿ ಇರಲಿವೆ. ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಇರಲಿದ್ದಾರೆ.
ರಥದ ಜೊತೆ ಭಜನಾ ತಂಡಗಳು ಪಾಲ್ಗೊಳ್ಳಲಿವೆ. ಸಮಾರೋಪದ ದಿನ ರಥವು ಮತ್ತೆ ಸ್ವಸ್ಥಾನಕ್ಕೆ ರಥ ಸಂಚರಿಸಲಿದ್ದು, ಹರಿದ್ವಾರದಿಂದ ಬರುವ ಪ್ರಮುಖರು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಲಿದ್ದಾರೆ.
ಮೆರವಣಿಗೆ:150 ಕ್ಕಿಂತಲೂ ಅಧಿಕ ದೇಶಿಯ ಜಾನಪದ ಕಲಾ ತಂಡಗಳ 4000 ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಅಳಿವಿನಂಚಿನಲ್ಲಿರುವ ಜಾನಪದ ಕಲೆಯ ರಕ್ಷಣೆ ಹಾಗೂ ಜಾನಪದ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದು ಈ ಮೆರವಣಿಗೆಯ ಉದ್ದೇಶ ಎನ್ನುತ್ತಾರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ. ರಾಷ್ಟ್ರೀಯ – ಅಂತರರಾಷ್ಟ್ರೀಯ ಕಲಾವಿದರು ಮಾತ್ರವಲ್ಲ, ನಮ್ಮ ರಾಜ್ಯ- ಜಿಲ್ಲೆಯ ಕಲಾವಿದರ ಜೊತೆ ಸಂಸ್ಥೆಯ 400ಕ್ಕೂ ಅಧಿಕ ಸಾಂಸ್ಕೃತಿಕ ಕಲಾವಿದ ವಿದ್ಯಾರ್ಥಿಗಳು ಪ್ರದರ್ಶನ ನೀಡಲಿದ್ದಾರೆ.
ಕೃಷಿ ಮೇಳ :ವಿರಾಸತ್‌ನಲ್ಲಿ ಕೃಷಿಯ ಅದ್ಭುತ ಲೋಕವೇ ನಿರ್ಮಾಣವಾಗಿದೆ. ಹಸಿರುಟ್ಟ ಬೆಡಗಿಯಂತೆ ‘ಗಿರಿ’ ಸಿಂಗರಿಸಿದೆ. ದೇಶ ವಿದೇಶಗಳಿಂದ ತಂದ ತಳಿಗಳು ಹಾಗೂ ಕಸಿ ಮಾಡಿದ ವೈವಿದ್ಯ ಫಲಗಳ ಜೊತೆಗೆ ಇಲ್ಲಿನ ಹಲವು ಬಗೆಯ ಫಲ ಪುಷ್ಪ ಮತ್ತು ತರಕಾರಿಗಳನ್ನು ಬೆಳೆಯವ ಕೆಲಸವನ್ನು 250 ಕ್ಕೂ ಹೆಚ್ಚಿನ ಕಾರ್ಮಿಕರು ನಿರ್ವಹಿಸುತ್ತಿದ್ದಾರೆ.
ಇಸ್ರೇಲ್ ತಂತಾಜ್ಞಾನ ಬಳಸಿ ಹಾಗಲಕಾಯಿ, ಕುಂಬಳಕಾಯಿ, ಹರಿವೆ, ಬೆಂಡೆಕಾಯಿ, ಬದನೆ, ಪಡುವಲಕಾಯಿ ಹಾಗೂ ಇನ್ನಿತರ ತರಕಾರಿಗಳು ಬೆಳೆಯಲಾಗಿದೆ.ಈ ಬಾರಿ ಕೃಷಿ ಮೇಳದಲ್ಲಿ ಹಣ್ಣು- ತರಕಾರಿ, ಬೀಜಗಳು, ನರ್ಸರಿಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಸಸ್ಯ ಪ್ರಭೇದಗಳು, ಕೃಷಿ ಉಪಕರಣ- ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇರಲಿವೆ.ವಿವಿಧ ಕೃಷಿ ಸಸ್ಯ ಪ್ರಭೇದಗಳ ಬೀಜ, ಅವುಗಳನ್ನು ಬೆಳೆಸಲು ಬೇಕಾದ ಯಂತ್ರ- ತಾಂತ್ರಿಕ ಸಲಕರಣೆಗಳು, ಕೃಷಿ ಉತ್ಪನ್ನಗಳು ಈ ಬಾರಿಯ ವಿಶೇಷ ಆಕರ್ಷಣೆ.
ಆಹಾರ ಮೇಳ:ಆಹಾರ ಮೇಳದಲ್ಲಿ ಸುಮಾರು 150ಕ್ಕೂ ಅಧಿಕ ಮಳಿಗೆಗಳಲ್ಲಿ ಪಾರಂಪರಿಕದಿಂದ ಹಿಡಿದು ಫಾಸ್ಟ್ಫುಡ್ ತನಕದ ಸಸ್ಯಾಹಾರ ಹಾಗೂ ಮಾಂಸಾಹಾರ ಇತ್ಯಾದಿಗಳ ವೈವಿಧ್ಯ ಇವೆ. ಆಹಾರದ ಪ್ರದರ್ಶನ ಮತ್ತು ಮಾರಾಟವಿದ್ದು, ಕಣ್ಣು- ನಾಲಗೆಗೆ ಮಾತ್ರವಲ್ಲ, ಹೊಟ್ಟೆಯನ್ನೂ ತುಂಬಿಸಿಕೊಳ್ಳಬಹುದು.
ಫಲಪುಷ್ಪ ಮೇಳ :ನಮ್ಮ ನೆಲದ ಚೆಂಡು, ಮಲ್ಲಿಗೆ ಮತ್ತಿತರ ಹೂಗಳ ಜೊತೆ ಹೂ ಗಿಡಗಳಾದ ಪಾಯಿಂಸೆಟ್ಟಿ, ಪೆಟುನಿಯಾ, ಸಾಲ್ವಿಯಾ, ಆಗ್ಲೋನಿನ, ಫಿಲಿಡೊಡ್ರನ್, ಟೊರ್ನಿಯ, ಕಲೆನಚೋ ವಿವಿಧ ಬಗೆಯ ಸಮಗ್ರ ಫಲ ಪುಷ್ಪ ಪ್ರದರ್ಶನ ಮೇಳೈಸಲಿವೆೆ. ಸದಾಪುಷ್ಪ, ಸೇವಂತಿಗೆ, ಜೀನ್ಯ, ಗೌರಿ, ಡಾಲಿ, ಲಿಲ್ಲಿ, ಕೆಪುಳ, ಸಿಲ್ವರ್ ಡಸ್ಟ್ ಲವೆಂಡಾರ್, ಅನೆಸೊಪ್ಪು, ಅಂತೋರಿಯಮ್, ಮಲ್ಲಿಗೆ, ಸಲ್ವಿಯ ಸ್ಪ್ಲೆಂಡನ್ಸ್, ಸೆಲೋಶಿಯ, ಚೈನೀಸ್ ಫ್ರಿಂಜ್, ವೀಪಿಂಗ್ ಫಿಗ್, ವಿಶ್ಬೋನ್ ಸೇರಿದಂತೆ ನಂದನವನವೇ ಧರೆಗಿಳಿದಂತೆ ಭಾಸವಾಗುತ್ತಿವೆ.ಇನ್ನು ಪುಷ್ಪಗಳಿಂದ ರಚಿಸಿದ ಆನೆ, ಕುದುರೆ, ಜಿರಾಫೆ, ನವಿಲು ಇತ್ಯಾದಿ ಕಲಾಕೃತಿಗಳಿವೆ.
ಔಷಧೀಯ ಸಸ್ಯಗಳಾದ ಅಮ್ರ, ನಂದಿ, ಬಕುಲಾ, ಶಲ್ಮಾಲಿ, ಜಂಬೂ, ತಿಲಕ, ತಾರೇಕಾಯಿ, ಸರಳ, ಪ್ರಿಯಂಗು, ಕದಂಬ, ತೆಂದುಕ, ಅಶ್ವತ್ಥ, ಶಿರೀಶ, ಸಪ್ತ ಪರ್ಣಿ, ದೇವದಾರು, ಸಂಪಿಗೆ, ಅಶೋಕ, ಕಪಿತ, ಶಾಲವೃಕ್ಷ, ನಾಗಾಕೇಸರ, ಪಾಲಶ ಗಿಡ ಸೇರಿದಂತೆ ನೂರಾರು ಸಸ್ಯ ಸಂಕುಲವಿದೆ.
ಕಲಾಕೃತಿ :ವಿರಾಸತ್ ನಡೆಯುವ ವಿದ್ಯಾಗಿರಿ ಆವರಣದ ತುಂಬಾ ಸುಮಾರು ಸಾವಿರಕ್ಕೂ ಅಧಿಕ ಕಲಾಕೃತಿಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಸಿಮೆಂಟ್‌ನಿಂದ ತಯಾರಿಸಲಾದ ಒಂಟೆ, ಅಳಿಲು, ಟಗರು, ಯಕ್ಷಗಾನ ಕಲಾಕೃತಿಗಳು ಹಾಗೂ 24 ಜೈನ ತೀರ್ಥಂಕರರು, ವಿವಿಧ ಸಂಪ್ರದಾಯ ಶೈಲಿಯ ಮದುವೆಯ ವೇಷಧಾರಿಗಳ ಆಕೃತಿಗಳು, ಜ್ಞಾನಪೀಠ ಪುರಸ್ಕೃತರ ಪ್ರತಿಮೆ, ವಿವೇಕಾನಂದ, ರಾಧಾಕೃಷ್ಣ, ಗಣಪತಿ, ಬಸವಣ್ಣ , ಮೀರಾಬಾಯಿ, ಕತಕ್ಕಳಿಯಂತಹ ಅನೇಕ ಆಕರ್ಷಣೀಯ ವೇಷಧಾರಿ ಅಕೃತಿಗಳ ಜೊತೆಗೆ ಮೋಲ್ಡ್ ಮಾಡಿದ ಕಲಾಕೃತಿಗಳು ಕಂಗೊಳಿಸಲಿವೆ. ವೀರಪುರುಷರು, ಪ್ರಾಣಿ-ಪಕ್ಷಿಗಳು, ಸಾಂಸ್ಕೃತಿಕ ನಾಯಕರು, ದೈವ-ದೇವರು, ಸ್ವಾತಂತ್ರö್ಯ ಹೋರಾಟಗಾರರು, ಪುಟಾಣಿಗಳ ನೆಚ್ಚಿನ ಕಾರ್ಟೂನ್ ಪಾತ್ರಗಳು, ತಾಯಿಯ ಮಮತೆ, ಬುದ್ಧನ ಧ್ಯಾನ, ನಗಿಸುವ ಮೋಟು, ಪ್ರಾದೇಶಿಕ ಕಲಾಪ್ರಕಾರಗಳ ಕಲಾಕೃತಿಗಳು ಮನ ಸೆಳೆಯುತ್ತವೆ. ಆನೆ, ಜಿರಾಫೆ, ಎತ್ತು, ಮಹಿಷಾಸುರ, ಯಕ್ಷಗಾನ, ಎತ್ತಿನ ಬಂಡಿ, ಚಕ್ರ, ಗಣಪತಿ, ಸಂಗೊಳ್ಳಿ ರಾಯಣ್ಣ, ಡೊಳ್ಳು ಕುಣಿತ, ಅಂಬೇಡ್ಕರ್, ವೀರಗಾಸೆ, ಹನುಮಂತ, ಕೋಟಿ ಚೆನ್ನಯ, ಲಕ್ಷ್ಮಿ ನರಸಿಂಹ, ವೀರಭದ್ರ , ಬಾಹುಬಲಿ, ವಿವೇಕಾನಂದ, ಬುದ್ಧ, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ಬಸವೇಶ್ವರ, ಆದಿಯೋಗಿ ಶಿವ, ಮೀರಾಬಾಯಿ, ಕಥಕ್ಕಳಿ ಪ್ರತಿಮೆಗಳನ್ನು ಕಾಣಬಹುದು.
ಛಾಯಾಚಿತ್ರ ಮತ್ತು ಲಲಿತಕಲಾ ಮೇಳ:ರಾಷ್ಟ್ರೀಯ-ಅಂತರರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರ ಸಾವಿರಕ್ಕೂ ಅಧಿಕ ಛಾಯಾಚಿತ್ರಗಳು, ಈ ಬಾರಿಯ ವಿರಾಸತ್‌ಗೆ ಆಹ್ವಾನಿಸಿದ 100ಕ್ಕೂ ಅಧಿಕ ಕಲಾಕೃತಿಗಳು ಲಲಿತಕಲಾ ಮೇಳದ ಸೊಬಗನ್ನು ಹೆಚ್ಚಿಸಲಿವೆ. 100 ಕಲಾಕೃತಿಗಳ ಪೈಕಿ ಅತ್ಯುತ್ತಮ ಕಲಾಕೃತಿಗಳಿಗೆ ವಿಶೇಷ ಬಹುಮಾನಗಳಿವೆ.
ಸೀರೆ- ಆಭರಣ:ಮಹಿಳೆಯರಿಗೆ ಕಣ್ಮನ ಸೆಳೆಯುವ ಕೈಮಗ್ಗಗಳ ಸೀರೆಯ ಪ್ರದರ್ಶನವು ಈ ಬಾರಿಯ ವಿಶೇಷ. ಸುಮಾರು 30ಕ್ಕೂ ಹೆಚ್ಚು ಮಳಿಗೆಗಳು ಇರಲಿದ್ದು, ಆಭರಣಗಳ ಮಳಿಗೆಗಳು ಸೌಂದರ್ಯವನ್ನೂ ಹೆಚ್ಚಿಸಲಿವೆ.
ಕಾರ್ಯಕ್ರಮಗಳು:ಡಿ.10, ಮಂಗಳವಾರ-ಉದ್ಘಾಟನೆ:ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂದಿರದಲ್ಲಿ ಡಿ.10ರ ಮಂಗಳವಾರ ಸಂಜೆ 5.30ರಿಂದ 6.30ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸುವರು.
ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸುವರು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಉಮಾನಾಥ ಕೋಟ್ಯಾನ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ, ಸೇರಿದಂತೆ ಗಣ್ಯರು ಉಪಸ್ಥಿತರಿರುವರು.
ಭವ್ಯ ಸಾಂಸ್ಕೃತಿಕ ಮೆರವಣಿಗೆ: ಸಂಜೆ 6.35ರಿಂದ ರಾತ್ರಿ 8.30ರ ವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಜೊತೆಗೆ ರಥಾರತಿ ನಡೆಯಲಿದೆ.ಡಿ.11, ಬುಧವಾರ:ಸಂಜೆ 5.45ರಿಂದ 6.30ರ ವರೆಗೆ ಆಳ್ವಾಸ್ ವಿರಾಸತ್ 2024 ಪ್ರಶಸ್ತಿ ಪ್ರದಾನ ನಡೆಯಲಿದ್ದು, ಈ ಬಾರಿ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಪ್ರದಾನ ಮಾಡಲಾಗುವುದು.
6.35ರಿಂದ 7.30ರ ವರೆಗೆ ಅವರು ಹಿಂದೂಸ್ಥಾನಿ ಗಾಯನ ನಡೆಸಿಕೊಡವರು.ಬಳಿಕ ರಾತ್ರಿ 7.45ರಿಂದ 9ರ ವರೆಗೆ ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದಿಂದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ ಹಾಗೂ 9ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ನಡೆಯಲಿದೆ.ಡಿ.12, ಗುರುವಾರ:ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು.
ಸಂಜೆ 6ರಿಂದ 8ರ ವೆರೆಗೆ ಗುಜರಾತ್ ಒಸ್ಮಾನ್ ಮೀರ್ ಮತ್ತು ಬಳಗದಿಂದ ಸಂಗೀತ ಲಹರಿ ಹಾಗೂ ರಾತ್ರಿ 8.15ರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಉಡುಪಿ ಕೊಡವೂರು ನೃತ್ಯ ನಿಕೇತನ, ಬೆಂಗಳೂರು ಚಿಗುರು ನೃತ್ಯಾಲಯ, ಮಂಗಳೂರು ಸನಾತನ ನಾಟ್ಯಾಲಯ, ಕುಂದಾಪುರ ನೃತ್ಯ ವಸಂತ ನಾಟ್ಯಾಲಯ, ಮಂಗಳೂರು ಗಾನ ನೃತ್ಯ ಅಕಾಡೆಮಿ.
ಮಂಗಳೂರು ಅರೆಹೊಳೆ ಪ್ರತಿಷ್ಠಾನದ ಕಲಾವಿದರು ನೃತ್ಯ ವೈವಿಧ್ಯ ನಡೆಸಿಕೊಡುವರು. ರಾತ್ರಿ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.ಡಿ.13, ಶುಕ್ರವಾರ:ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 8 ಗಂಟೆಯವರೆಗೆ ನೀಲಾದ್ರಿ ಕುಮಾರ್ ಮತ್ತು ತಂಡದಿಂದ ‘ಸೌಂಡ್ ಆಫ್ ಇಂಡಿಯಾ’ ಹಾಗೂ 8.15ರಿಂದ 9ರ ವರೆಗೆ ಕೋಲ್ಕತ್ತಾದ ಆಶೀಮ್ ಬಂಧು ಚಟರ್ಜಿ ಸಂಯೋಜನೆಯಲ್ಲಿ ಭರತನಾಟ್ಯ, ಒಡಿಸ್ಸಿ, ಕಥಕ್ ಸಂಗಮದ ತ್ರಿಪರ್ಣ ಪ್ರಸ್ತುತಗೊಳ್ಳಲಿದೆ. ರಾತ್ರಿ 9ರಿಂದ ಬೆಂಗಳೂರು ಕಾರ್ತೀಸ್ ಪರ್‌ಫಾರ್ಮಿಂಗ್ ಆರ್ಟ್ಸ್ ‘ನೃತ್ಯೋಲ್ಲಾಸ’ ಹಾಗೂ ಬೆಂಗಳೂರು ಶ್ರೀ ರಾಜರಾಜೇಶ್ವರಿ ಕಲಾನಿಕೇತನದಿಂದ ಕೂಚುಪುಡಿ ನೃತ್ಯ ಹಾಗೂ 9.15ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಪ್ರದರ್ಶನಗೊಳ್ಳಲಿದೆ.
ಡಿ.14, ಶನಿವಾರ:ಸಂಜೆ 5.45ಕ್ಕೆ ದೀಪ ಪ್ರಜ್ವಲನ ಹಾಗೂ 5.55ಕ್ಕೆ ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ ನೀಡಲಾಗುವುದು. ಸಂಜೆ 6ರಿಂದ 9ರ ವರೆಗೆ ಚೆನ್ನೆöÊ ಸ್ಟೆಕೇಟೋದ ಖ್ಯಾತ 25 ಕಲಾವಿದರಿಂದ ಭರ್ಜರಿ ‘ಸಂಗೀತ ರಸದೌತಣ’ ಹಾಗೂ ರಾತ್ರಿ 9ಕ್ಕೆ ಸಾಂಸ್ಕೃತಿಕ ರಥ ಸ್ವಸ್ಥಾನ ಗಮನ ನಡೆಯಲಿದೆ.
ಡಿ.15, ಭಾನುವಾರ:ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆದರೆ, ಕೃಷಿ ಮೇಳ, ಆಹಾರ ಮೇಳ, ಫಲಪುಷ್ಪ ಮೇಳ, ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ, ಚಿತ್ರಕಲಾ ಮೇಳ, ಕಲಾಕೃತಿ ಪ್ರದರ್ಶನ, ಛಾಯಾಚಿತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಮಹಾಮೇಳ ದಿನಪೂರ್ತಿ ತೆರೆದಿರುತ್ತದೆ. ‘ಆಳ್ವಾಸ್ ವಿರಾಸತ್‌ಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ಕಾರ್ಯಕ್ರಮಗಳು ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಲಿವೆ.
ಸುಮಾರು 40 ಸಾವಿರಕ್ಕೂ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ಆರಂಭಗೊಳ್ಳುವ 15 ನಿಮಿಷ ಮೊದಲೇ ಆಸೀನರಾಗಬೇಕು. ವಾಹನ ಪಾರ್ಕಿಂಗ್‌ಗೆ ವಿಶಾಲ ವ್ಯವಸ್ಥೆ ಇರುತ್ತದೆ. ಕಣ್ಮನ ಸೆಳೆಯುವ ಸೊಬಗನ್ನು ಸವಿಯಬಹುದು’ ಎಂದಿದ್ದಾರೆ.