ಉಡುಪಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಭಾರತ- ಭಾರತಿ ಟ್ರಸ್ಟ್ ಉಡುಪಿ ಇದರ ವತಿಯಿಂದ “ಎಕ್ ಭಾರತ್- ಶ್ರೇಷ್ಠ್ ಭಾರತ್ ಹಾಗೂ ಯುಗಾದಿ ಹಬ್ಬದ ಆಚರಣೆ ಕಾರ್ಯಕ್ರಮ ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಬ್ರಿಟಿಷರು ಬಿಟ್ಟು ಹೋದ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮ ಶಾಲಾ ಪಠ್ಯ ಪುಸ್ತಕದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಿಕೊಂಡಿದೆ. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಯಾವ ಚಿಂತನೆ ಬೆಳೆಸುತ್ತೇವೆಯೋ, ಅದು ಮುಂದೆ ರಾಷ್ಟ್ರದ ಚಿಂತನೆಯಾಗಿ ರೂಪುಗೊಳ್ಳುತ್ತದೆ. ವಾಸ್ತವ ಸಂಗತಿಗಳನ್ನು ನಾವು ಅರಿತುಕೊಳ್ಳುವುದು ಬಹಳ ಮುಖ್ಯ. ಇಂದು ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವುದು ತುಂಬಾ ಕಷ್ಟದ ಕೆಲಸ. ಅದು ಈಗಾಗಲೇ ಮುಚ್ಚುವ ಸ್ಥಿತಿಗೆ ತಲುಪಿದೆ. ಕರಾವಳಿ ಕರ್ನಾಟಕದಲ್ಲಿ ಇನ್ನೂ ಕೆಲವೇ ವರ್ಷಗಳಲ್ಲಿ ಶೇ.90ರಷ್ಟು ಕನ್ನಡ ಪ್ರಾಥಮಿಕ ಶಾಲೆಗಳು ಸಂಪೂರ್ಣವಾಗಿ ಮುಚ್ಚುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರುತ್ತಿಲ್ಲ. ಇದು ಹೀಗೆ ಮುಂದುವರಿದರೆ ಇನ್ನೂ ಕೆಲವೇ ವರ್ಷಗಳಲ್ಲಿ ಕನ್ನಡ ಭಾಷೆ ಜೀವವನ್ನು ಕಳೆದುಕೊಳ್ಳುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ವಿಎಚ್ ಪಿ ದಕ್ಷಿಣ ಪ್ರಾಂತದ ಸಂಪರ್ಕ್ ಪ್ರಮುಖ್ ಪ್ರೇಮಾನಂದ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಕಾಶ್ ಚಂದ್ರ, ಕಾರ್ಯಕ್ರಮದ ಆಯೋಜಕ ಅರುಣ್ ಕುಮಾರ್, ಟ್ರಸ್ಟ್ ನ ಸ್ಟೇಟ್ ಕೋ ಆರ್ಡಿನೆಟರ್ ಜಯಂತ್ ಮಲ್ಪೆ, ಸುಧಾ ಶೆಣೈ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳು ಹಾಗೂ ಮಹಿಳಾ ಭಜನಾ ಮಂಡಳಿಯ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.












