ಉಡುಪಿ: ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರು ಕನ್ನಡ ಮಾಧ್ಯಮದವರು ಎನ್ನಲು ಯಾವುದೇ ಅಳುಕು ಬೇಡ. ಕನ್ನಡ ಮಾಧ್ಯಮದಲ್ಲಿ ಓದಿದವರು ಇಂದು ಸರ್ವಾಂತರ್ಯಾಮಿಯಾಗಿದ್ದಾರೆ ಎಂದು ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಶೋಕ್ ರವರು ಹೇಳಿದರು.
ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಯಶೋ ಮಾಧ್ಯಮ 2024 ಪ್ರಶಸ್ತಿ ಪ್ರಧಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ರಾಜ್ಯದ, ದೇಶದ ಮಾತ್ರವಲ್ಲ ಹೊರ ದೇಶಗಳಲ್ಲಿಯೂ ಉನ್ನತ ಹುದ್ದೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರು ಕೆಲಸ ಮಾಡುತ್ತಿದ್ದಾರೆ.
116 ವರ್ಷಗಳ ಇತಿಹಾಸವಿರುವ ಈ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತುಂಬಾ ಪುಣ್ಯವಂತರಾಗಿದ್ದಾರೆ. ಶಿಕ್ಷಕರು ಎಷ್ಟು ಹೊತ್ತು ಕೆಲಸ ಮಾಡಿದ್ದಾರೆ ಎಂಬುದು ಮುಖ್ಯವಲ್ಲ, ಎಷ್ಟು ಹೊತ್ತು ಗುಣಮಟ್ಟದ ಕೆಲಸ ಮಾಡಿದ್ದೀರಿ ಎಂಬುದು ಮುಖ್ಯವಾಗುತ್ತದೆ.
ಉತ್ತಮ ಸಮಾಜ ನಿರ್ಮಾಣ ಹಾಗೂ ಭವ್ಯ ಭಾರತವನ್ನು ನಿರ್ಮಾಣ ಮಾಡುವ ಕೆಲಸ ಪೋಷಕರಿಗಿಂತ ಹೆಚ್ಚು ಶಿಕ್ಷಕರ ಜವಾಬ್ದಾರಿಯಾಗಿದೆ. ಯಾವುದೇ ಕೆಲಸ ಮಾಡುವಾಗ ಕ್ವಾಲಿಟಿ ಕೆಲಸ ಮಾಡಿರಿ, ರೈತಾಪಿ ಬಳಗದ ಅನ್ನ ತಿನ್ನುವ ನಾವು ರೈತಾಪಿ ವರ್ಗದವರ ಏಳಿಗೆಗಾಗಿ ಕೆಲಸ ಮಾಡಬೇಕು. ಹಾಗೆಯೇ 116 ವರ್ಷಗಳ ಇತಿಹಾಸದ ಈ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯು ಮುಂದಿನ ದಿನಗಳಲ್ಲಿ ಉತ್ತಮವಾದ ಮಾದರಿ ಪ್ರಾಥಮಿಕ ಶಾಲೆಯಾಗಲಿ ಎಂದು ಹಾರೈಸಿದರು. ಹಾಗೆಯೇ ಸ್ಪಂದನ ಸೇವಾ ಸಂಸ್ಥೆಯ ಈ ಸಮಾಜಮುಖಿ ಕೆಲಸವನ್ನು ಶ್ಲಾಘಿಸಿದರು.
ಹಿರಿಯ ಪತ್ರಕರ್ತರಾದ ಜನಾರ್ಧನ್ ಕೊಡವೂರು ಅವರು ಮಾತನಾಡಿ ಸ್ಪಂದನ ಸೇವಾ ಸಂಸ್ಥೆಯು ಈ ಶಾಲೆಗೆ ಪ್ರತಿ ವರ್ಷ ನೋಟ್ ಪುಸ್ತಕಗಳನ್ನು ಉಚಿತವಾಗಿ ನೀಡುತ್ತಾ ಬರುತ್ತಿದೆ. ಅದರೊಂದಿಗೆ ಅಧ್ಯಕ್ಷರಾದ ವೆಂಕಟೇಶ್ ಪೈ ಅವರು ಸ್ವತಃ ಪತ್ರಕರ್ತರಾಗಿರುವುದರಿಂದ ಉಡುಪಿ ಜಿಲ್ಲೆಯ ಒಬ್ಬ ಪತ್ರಕರ್ತರನ್ನು ಗುರುತಿಸಿ ಯಶೋ ಮಾಧ್ಯಮ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದ್ದಾರೆ. ಹಾಗಾಗಿ ಈ ಬಾರಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಿ ಅವರಿಗೆ ಯಶೋಮಾಧ್ಯಮ 2024 ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ.
ಸ್ಪಂದನಾ ಸೇವಾ ಸಂಸ್ಥೆಯ ಪದಾಧಿಕಾರಿಗಳಲ್ಲಿ ಅಧ್ಯಕ್ಷ ವೆಂಕಟೇಶ್ ಪೈ, ಕಾರ್ಯದರ್ಶಿ ಸಂತೋಷ್ ಕಾಮತ್, ಖಜಾಂಚಿ ರಜನಿ. ವಿ.ಪೈ, ಸಹ ಕಾರ್ಯದರ್ಶಿಗಳಾದ ಶಿವಾನಂದ ಕಾಮತ್ ನಾಲ್ಕು ಜನರು ಇದೇ ಶಾಲೆಯಲ್ಲಿ ಓದಿದ್ದಾರೆ. ಅವರು ಓದಿದ ಈ ಶಾಲೆಗೆ ಪ್ರತಿ ವರ್ಷ ಉಚಿತವಾಗಿ ನೋಟ್ ಪುಸ್ತಕ ನೀಡುತ್ತಿರುವುದು ಸಮಾಜಮುಖಿ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯು ಇನ್ನೂ ಉತ್ತಮ ಕೆಲಸ ಮಾಡಲಿ ಎಂದು ಹಾರೈಸಿದರು.
ಯಶೋ ಮಾಧ್ಯಮ 2024 ಪ್ರಶಸ್ತಿ ಪುರಸ್ಕೃತರಾದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿ ಅವರು ಮಾತನಾಡಿ ಪ್ರಶಸ್ತಿಗೆ ಆಯ್ಕೆ ಮಾಡಿ ಜವಾಬ್ಧಾರಿಯನ್ನು ಹೆಚ್ಚಿಸಿದ್ದಾರೆ ಎಂದರು.
ಮಣಿಪಾಲ ಕಾಲೇಜು ಆಫ್ ನರ್ಸಿಂಗ್ ನ ಸಹಾಯಕ ಪ್ರಾಧ್ಯಾಪಕರಾದ ಡಾ. ಮರಿಯಾ ಪಾಯಸ್ ಅವರು ಮಾತನಾಡಿ ಸ್ಪಂದನ ಸೇವಾ ಸಂಸ್ಥೆ ಉತ್ತಮವಾದ ಸಮಾಜ ಸೇವೆಯನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡಲಿ ಎಂದು ಹಾರೈಸಿದರು.
ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪೈ, ಖಜಾಂಚಿಗಳಾದ ರಜನಿ.ವಿ. ಪೈ ಅವರು ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ದಲ್ಲಿ ಶಾಲಾ ಆಡಳಿತ ಮಂಡಳಿಯ ಪ್ರಕಾಶ್ ಶೆಟ್ಟಿ, ಡಾ. ಶೇಷಪ್ಪ ರೈ, ಮುಖ್ಯೋಪಾಧ್ಯಾಯರಾದ ಸಂತೋಷ ಶೆಟ್ಟಿ, ಸ್ಪಂದನಾ ಸೇವಾ ಸಂಸ್ಥೆಯ ಕಾರ್ಯದರ್ಶಿ ಸಂತೋಷ್ ಕಾಮತ್ ಹಾಗೂ ಶಾಲೆಯ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಪೋಷಕರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.