ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು (ಡಿ.8) ಕೊನೆಯುಸಿರೆಳೆದಿದ್ದಾರೆ. ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ನಟಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 

ಲೀಲಾವತಿ ಸುಮಾರು 50 ವರ್ಷಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು. ತಮ್ಮ ಜೀವಿತಾವಧಿಯಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರೋ ಲೀಲಾವತಿ ಪುತ್ರ ವಿನೋದ್ ರಾಜ್ ಹಾಗೂ ಅವರ ಕುಟುಂಬವನ್ನು ಅಗಲಿದಿದ್ದಾರೆ.

ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಕನ್ನ ಚಿತ್ರರಂಗದ ಗಣ್ಯರೊಂದಿಗೆ ನಟಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಸಮಾಜ ಸೇವೆಯಲ್ಲಿಯೂ ಲೀಲಾವತಿ ತಮ್ಮ ಕೈಯಲ್ಲಾದ ನೆರವನ್ನು ನೀಡುತ್ತಲೇ ಬಂದಿದ್ದರು. ನೆಲಮಂಗಲದಲ್ಲಿ ಪ್ರಾಥಮಿಕ ಚಿಕಿತ್ಸೆ ಹಾಗೂ ಪಶು ವೈದ್ಯಕೀಯ ಆಸ್ಪತ್ರೆಯನ್ನು ನಿರ್ಮಾಣ ಮಾಡಿದ್ದಾರೆ. ಲೀಲಾವತಿ ನಿಧನಕ್ಕೆ ಚಿತ್ರರಂಗದ ತಾರೆಯರು, ರಾಜಕೀಯ ಕ್ಷೇತ್ರ ಗಣ್ಯರು ಹಾಗೂ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. 

ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿರುವಾಗ ಚೆನ್ನೈನಲ್ಲಿ ಇದ್ದ ಲೀಲಾವತಿ ನೆಲಮಂಗಲದ ಸೋಲದೇವನಹಳ್ಳಿ ಬಳಿ ಜಮೀನನ್ನು ಖರೀದಿ ಮಾಡಿ ಕರ್ನಾಟಕಕ್ಕೆ ಶಿಫ್ಟ್ ಆಗಿದ್ದರು. ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ ಬಳಿಕ ಕೃಷಿ ಕಡೆ ಒಲವು ಬೆಳೆಸಿಕೊಂಡಿದ್ದರು. ಅಲ್ಲದೆ ಅವರ ಪುತ್ರ ವಿನೋದ್ ರಾಜ್‌ಗೂ ಕೃಷಿಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರೇರಣೆಯಾಗಿದ್ದರು. 

ಲೀಲಾವತಿ ಅನಾರೋಗ್ಯದಿಂದ ಬಳಲುತ್ತಿದ್ದಾಗ ಕನ್ನಡ ಚಿತ್ರರಂಗದ ಗಣ್ಯರಾದ ಶಿವರಾಜ್‌ಕುಮಾರ್, ದರ್ಶನ್, ಅರ್ಜುನ್ ಸರ್ಜಾ, ಡಿಕೆ ಶಿವಕುಮಾರ್, ಸಿಎಂ ಸಿದ್ಧರಾಮಯ್ಯ ಸೇರಿದಂತೆ ಎಲ್ಲಾ ಕ್ಷೇತ್ರದ ಗಣ್ಯರು ಬಂದು ಆರೋಗ್ಯ ವಿಚಾರಣೆ ಮಾಡಿದ್ದರು.