ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಸಂಯುಕ್ತ ಕರ್ನಾಟಕದ ಸಂಪಾದಕ ವಸಂತ ನಾಡಿಗೇರ ಅವರು ಸೋಮವಾರ (ಸೆ.09) ಬೆಳಗಿನ ಜಾವ ತೀವ್ರ ಹೃದಯಾಘಾತದಿಂದ ನಿಧನರಾದರು.
ನಾಡಿಗೇರ ಅವರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೂರುವರೆ ದಶಕಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ. ತಮ್ಮ ವಿಶಿಷ್ಟ ಮಾತಿನ ಶೈಲಿ ಹಾಗೂ ವಿಭಿನ್ನ ಹೆಡ್ಲೈನ್ಗಳ ಮೂಲಕವೇ ಪತ್ರಿಕೋದ್ಯಮದಲ್ಲಿ ಖ್ಯಾತಿ ಗಳಿಸಿದ್ದರು. ವಸಂತ್ ಸರ್ ಎಂದೇ ಸುದ್ದಿಮನೆಗಳಲ್ಲಿ ಪ್ರಸಿದ್ಧರಾಗಿದ್ದರು.
ವಿಜಯಕರ್ನಾಟಕ ಹಾಗೂ ವಿಶ್ವವಾಣಿ ನಂತರ ಕಳೆದ ಎರಡು ವರ್ಷಗಳಿಂದ ಸಂಯುಕ್ತ ಕರ್ನಾಟಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ನಾಡಿಗೇರ ಅವರು ಮೂಲತಃ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನವರು. ರಸಾಯನ ಶಾಸ್ತ್ರದಲ್ಲಿ ಪದವಿ ಪಡೆದ ವಸಂತ ನಾಡಿಗೇರ ಅವರಿಗೆ ಪತ್ರಿಕೋದ್ಯಮದ ಮೇಲೆ ಹೆಚ್ಚು ಆಸಕ್ತಿ ಇತ್ತು. ಎಂಬತ್ತರ ದಶಕದಲ್ಲಿ ಸಂಯುಕ್ತ ಕರ್ನಾಟದಿಂದ ವೃತ್ತಿ ಜೀವನ ಆರಂಭಿಸಿದವರು. ಉಪಸಂಪಾದಕ, ಸುದ್ದಿಸಂಪಾದಕ ಹಾಗೂ ಸಂಪಾದಕರಾಗಿ ವೃತ್ತಿ ಜೀವನದಲ್ಲಿ ಯಶಸ್ಸು ಕಂಡ ವಸಂತ ನಾಡಿಗೇರ ಅವರು ಸಾಕಷ್ಟು ಯುವ ಪತ್ರಕರ್ತರನ್ನೂ ಬೆಳೆಸಿದ್ದರು.
ಉತ್ತಮ ಬರಹಗಾರರೂ ಆಗಿದ್ದ ವಸಂತ ನಾಡಿಗೇರ ಅವರು ಕನ್ನಡ ಪ್ರಭದಲ್ಲಿ ಆರ್ಥಿಕ ವಿಶ್ಲೇಷಣೆ ಬರೆಯುತ್ತಿದ್ದರು. ಅವರಿಗೆ ಸಿನೆಮಾದಲ್ಲೂ ಆಸಕ್ತಿ ಇತ್ತು. ವಿಜಯ ಕರ್ನಾಟಕದಲ್ಲಿದ್ದಾಗ ಅವರ ಬಡಿಗೇರ್ ಹಾಗೂ ನಾಡಿಗೇರ್ ಎನ್ನುವ ಹಾಸ್ಯ ಅಂಕಣವೂ ಜನಪ್ರಿಯವಾಗಿತ್ತು. ಇದೀಗ ಅವರನ್ನು ಕಳೆದುಕೊಂಡಿರುವುದು ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟವಾಗಿದೆ.