ಕಟಪಾಡಿ: ಲಾರಿ ಡಿಕ್ಕಿ; ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದ ಕಾರು

ಉಡುಪಿ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರೊಂದು ಪಲ್ಟಿಯಾಗಿ ಡಿವೈಡರ್ ಮೇಲೆ ಬಿದ್ದ ಘಟನೆ ಉಡುಪಿ ಕಟಪಾಡಿ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ವ್ಯಾಗ್ನರ್ ಕಾರಿಗೆ, ಅದೇ ದಿಕ್ಕಿನಲ್ಲಿ ತೆರಳುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ಪಲ್ಟಿಯಾಗಿ ಹೆದ್ದಾರಿಯ ಡಿವೈಡರ್ ಮೇಲೆ ಬಿದ್ದಿದೆ. ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಕಾರಿನಲ್ಲಿದ್ದ ತಂದೆ ಮತ್ತು ಮಗ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆದ್ದಾರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.