ಕಟಪಾಡಿ: ಮಟ್ಟು ಗುಳ್ಳ, ಶಂಕರಪುರ ಮಲ್ಲಿಗೆಯ ಶಾಶ್ವತ ಚಿತ್ರ ಸಹಿತ ಅಂಚೆ ಮೊಹರು ಅನಾವರಣ

ಉಡುಪಿ: ಭಾರತೀಯ ಅಂಚೆ ಇಲಾಖೆ ಉಡುಪಿ ವಿಭಾಗದ ವತಿಯಿಂದ ಭಾರತೀಯ ಸಂವಿಧಾನದ ಅಮೃತೋತ್ಸವದ ಅಂಗವಾಗಿ ಕಟಪಾಡಿ ಮತ್ತು ಶಂಕರಪುರ ಉಪ ಅಂಚೆ ಕಚೇರಿಗಳಲ್ಲಿ ಕ್ರಮವಾಗಿ ತುಳುನಾಡಿನ ಜನಪ್ರಿಯ ವಸ್ತು ಗಳಾದ ಮಟ್ಟು ಗುಳ್ಳ ಮತ್ತು ಶಂಕರಪುರ ಮಲ್ಲಿಗೆ ಗಳ ಶಾಶ್ವತ ಚಿತ್ರಾತ್ಮಕ ರದ್ದತಿ (permanent pictorial cancellation) ಅಂಚೆ ಮೊಹರನ್ನು ವಿದ್ಯುಕ್ತವಾಗಿ ಅನಾವರಣಗೊಳಿಸಲಾಯಿತು.

ಸಮಾರಂಭದಲ್ಲಿ ಉಡುಪಿಯ ಅಂಚೆ ಅಧೀಕ್ಷಕ ರಮೇಶ್ ಪ್ರಭು, ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್, ದಯಾನಂದ ದೇವಾಡಿಗ, ವಸಂತ, ಶಂಕರ ಲಮಾಣಿ,ಉಪ ಅಂಚೆ ಪಾಲಕರಾದ ಹರೀಶ್ ಕಿರಣ್, ಲೀಲಾವತಿ ತಂತ್ರಿ, ಎಲ್ಲಾ ಅಂಚೆ ಸಿಬ್ಬಂದಿ ವರ್ಗ, ಖ್ಯಾತ ಅಂಚೆ ಚೀಟಿ ಸಂಗ್ರಾಹಕರಾದ ಕೃಷ್ಣಯ್ಯ,ಡೇನಿಯಲ್ ಮೊಂತಾರೋ, ದಿನಕರ ರಾವ್, ಸಂದೀಪ್ ಕುಮಾರ್, ವಿದ್ಯಾ ಬಾಗ್ಲೋಡಿ, ಪೂರ್ಣಿಮಾ ಜನಾರ್ದನ್ ಮುಂತಾದವರು ಭಾಗವಹಿಸಿದ್ದರು.

ಸಾರ್ವಜನಿಕರು ತಾವು ರವಾನಿಸುವ ಕಾಗದ ಪತ್ರ ಮೇಲೆ ಈ ಮೊಹರನ್ನು ಮೇಲಿನ ಅಂಚೆ ಕಛೇರಿಗಳಲ್ಲಿ ಮುದ್ರಿಸಿ, ತುಳುನಾಡಿನ ಈ ಸಂಪತ್ತುಗಳ ಕಂಪನ್ನು ಎಲ್ಲೆಡೆ ಪಸರಿಸಬಹುದಾಗಿದೆ ಎಂದು ಅಂಚೆ ಪ್ರಕಟನೆ ತಿಳಿಸಿದೆ.