ಉಡುಪಿ: ಉಡುಪಿ ಜಿಲ್ಲೆಯ ಕಟಪಾಡಿ ಪೇಟೆಯಲ್ಲಿ ಶಿಥಿಲಗೊಂಡಿದ್ದ ನೀರಿನ ಟ್ಯಾಂಕೊಂದನ್ನು ತೆರವು ಮಾಡಲಾಗಿದೆ. ಆದರೆ ಈ ವೇಳೆ ನಿರ್ಲಕ್ಷ್ಯ ವಹಿಸಿದ್ದರಿಂದ ಪಕ್ಕದ ಕಟ್ಟಡಕ್ಕೆ ಹಾನಿಯಾಗಿದೆ.
ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡಿದ್ದ ಈ ನೀರಿನ ಟ್ಯಾಂಕ್ ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿ ಇತ್ತು. ಕುಸಿಯುವ ಹಂತದಲ್ಲಿದ್ದ ಟ್ಯಾಂಕಿಯನ್ನು ತೆರವುಗೊಳಿಸಿಲು ಸ್ಥಳೀಯ ಕಟಪಾಡಿ ಪಂಚಾಯತ್ ತೀರ್ಮಾನ ಮಾಡಿತ್ತು. ಕೊನೆಗೂ ಪುರಾತನ ಟ್ಯಾಂಕಿಯನ್ನು ಉರುಳಿಸಿ ನೆಲಸಮ ಮಾಡಲಾಯಿತು.
ಆದರೆ ಈ ವೇಳೆ ಪಕ್ಕದಲ್ಲಿದ್ದ ಡಾ. ರವೀಂದ್ರ ಶೆಟ್ಟಿ ಎಂಬುವರಿಗೆ ಸೇರಿದ ಕ್ಲಿನಿಕ್ ಹಾಗೂ ಕಟ್ಟಡಕ್ಕೆ ಹಾನಿ ಸಂಭವಿಸಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮವನ್ನು ವಹಿಸದೆ ಇರುವುದರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.