ಜೆಡ್ಡಾ: ಬಹುನಿರೀಕ್ಷಿತ ಐಪಿಎಲ್ ಮೆಗಾ ಹರಾಜು 2025 ಆರಂಭವಾಗಿದೆ. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಶನಿವಾರ (ನ.24) ನಡೆಯುತ್ತಿದೆ. ಮಲ್ಲಿಕಾ ಸಾಗರ್ ಐಪಿಎಲ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮೊದಲ ಸೆಟ್ ನಲ್ಲಿಯೇ ಭಾರಿ ಬಿಡ್ಡಿಂಗ್ ನಡೆದಿದ್ದು, ಪಂತ್ ಮತ್ತು ಅಯ್ಯರ್ ದಾಖಲೆಯ ಬೆಲೆಗೆ ಮಾರಾಟವಾದರು.
ಆರಂಭದಲ್ಲಿ ಅರ್ಶದೀಪ್ ಸಿಂಗ್ ಅವರು 18 ಕೋಟಿಗೆ ಪಂಜಾಬ್ ಕಿಂಗ್ಸ್ ಪಾಲಾದರು. ಬಳಿಕ ರಬಾಡಾ ಗುಜರಾತ್ ಟೈಟಾನ್ಸ್ ಗೆ ಬಳಿಕ ಶ್ರೇಯಸ್ ಅಯ್ಯರ್ ಅವರು ದಾಖಲೆಯ 26.75 ಕೋಟಿ ರೂ ಬೆಲೆಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು. ಇಂಗ್ಲೆಂಡ್ ನ ಜೋಸ್ ಬಟ್ಲರ್ ಅವರು 15.75 ಕೋಟಿ ರೂ ಗೆ ಗುಜರಾತ್ ತಂಡ ಸೇರಿದರು. ಅಯ್ಯರ್ ಅವರ ದಾಖಲೆ ಮುರಿದ ರಿಷಭ್ ಪಂತ್ ಬರೋಬ್ಬರಿ 27 ಕೋಟಿ ರೂ ಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದರು.
ಹೈದರಾಬಾದ್ ಪರ ಶಮಿ:
ವೇಗಿ ಮೊಹಮ್ಮದ್ ಶಮಿ ಖರೀದಿಗಾಗಿ ಕೆಕೆಆರ್ ಮತ್ತು ಚೆನ್ನೈ ನಡುವೆ ಪೈಪೋಟಿ ಆರಂಭವಾಯಿತು. ಬಳಿಕ ಲಕ್ನೋ ಬಿಡ್ಡಿಂಗ್ ಗೆ ಇಳಿಯಿತು. ಕೊನೆಗೆ ಬಿಡ್ಡಿಂಗ್ ಗೆ ಹೈದರಾಬಾದ್ ಶಮಿಯನ್ನು 10 ಕೋಟಿ ರೂ ಗೆ ಖರೀದಿಸಿತು. ಗುಜರಾತ್ ಪರವಾಗಿ ಕಳೆದ ಮೂರು ಸೀಸನ್ ಆಡಿದ್ದ ಶಮಿ ಈ ಬಾರಿ ಹೈದರಾಬಾದ್ ತಂಡದಲ್ಲಿ ಆಡಲಿದ್ದಾರೆ.
ಮಿಲ್ಲರ್ ಗೆ ಲಕ್ನೋ ಗಾಳ:
ದಕ್ಷಿಣ ಆಫ್ರಿಕಾ ಆಟಗಾರ ಡೇವಿಡ್ ಮಿಲ್ಲರ್ ಅವರಿಗೆ ಗುಜರಾತ್ ಮತ್ತು ಬೆಂಗಳೂರು ತಂಡಗಳು ಬಿಡ್ ಮಾಡಿದವು. ಆದರೆ ಕೊನೆಗೆ ಲಕ್ನೋ ಪಾಲಾದರು. ಮಿಲ್ಲರ್ ಗೆ 7.50 ಕೋಟಿ ರೂ ನೀಡಲಾಯಿತು.
ಯುಜಿ ಚಾಹಲ್ :
ರಾಜಸ್ತಾನ ತಂಡದಲ್ಲಿದ್ದ ಸ್ಪಿನ್ನರ್ ಯುಜಿ ಚಾಹಲ್ ಅವರಿಗೆ ಮೊದಲು ಚೆನ್ನೈ ಬಿಡ್ ಮಾಡಿತು. ಬಳಿಕ ಗುಜರಾತ್ ಕೂಡಾ ಪೈಪೋಟಿಯಲ್ಲಿ ಬಿಡ್ಡಿಂಗ್ ನಡೆಸಿತು. ಪಂಜಾಬ್ ಮತ್ತು ಲಕ್ನೋ ಕೂಡಾ ಬಿಡ್ಡಿಂಗ್ ನಡೆಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡಾ ಪ್ರಯತ್ನಿಸಿತು. ಕೊನೆಗೆ 18 ಕೋಟಿ ರೂ ಗೆ ಚಾಹಲ್ ಪಂಜಾಬ್ ಕಿಂಗ್ಸ್ ತಂಡದ ಪಾಲಾದರು.












