ಏಕಬಳಕೆ ಪ್ಲಾಸ್ಟಿಕ್ ನಿಷೇಧದ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ

ಉಡುಪಿ: ನಗರಸಭೆಯ ವ್ಯಾಪ್ತಿಯಲ್ಲಿ ಏಕಬಳಕೆಯ ಪ್ಲಾಸ್ಟಿಕ್ ನಿಷೇಧದ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ
ಪಾಲಿಸುವಂತೆ ಸರಕಾರ ಆದೇಶಿಸಿದ್ದು, ಏಕ ಬಳಕೆಯ ಪ್ಲಾಸ್ಟಿಕ್‌ನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಸಲುವಾಗಿ ನಿಷೇಧಿತ ಪ್ಲಾಸ್ಟಿಕ್ ಸಾಮಾಗ್ರಿಗಳ ಮಾರಾಟದ ಮೇಲೆ ಮೊದಲು 500 ರೂ. ದಂಡ ಹಾಗೂ 2ನೇ ಬಾರಿಗೆ 1000 ರೂ ದಂಡ ವಿಧಿಸಲಾಗುವುದು. ಆ ನಂತರವೂ
ಪ್ಲಾಸ್ಟಿಕ್ ಮಾರಾಟ ಕಂಡು ಬಂದಲ್ಲಿ ಅಂತಹ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

ನಿಷೇಧಿತ ಪ್ಲಾಸ್ಟಿಕ್‌ನ್ನು ಅಕ್ರಮವಾಗಿ ದಾಸ್ತಾನು ಪಡಿಸಿದ್ದಲ್ಲಿ 1 ಕೆ.ಜಿ ವರೆಗಿನ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಮೊದಲ ಬಾರಿಗೆ ರೂ.500 ಹಾಗೂ
ಎರಡನೇ ಬಾರಿಗೆ ರೂ. 1,000, 1 ರಿಂದ 10 ಕೆ.ಜಿ ವರೆಗಿನ ಪ್ಲಾಸ್ಟಿಕ್ ದಾಸ್ತಾನಿಗೆ ಮೊದಲ ಬಾರಿಗೆ ರೂ. 2,000 ಹಾಗೂ ಎರಡನೇ ಬಾರಿಗೆ ರೂ.5,000, 10 ರಿಂದ 50 ಕೆ.ಜಿ ವರೆಗಿನ ಪ್ಲಾಸ್ಟಿಕ್ ದಾಸ್ತಾನಿಗೆ ಮೊದಲ ಬಾರಿಗೆ ರೂ. 5,000 ಹಾಗೂ ಎರಡನೇ ಬಾರಿಗೆ ರೂ. 10,000, 50 ರಿಂದ 100 ಕೆ.ಜಿ ವರೆಗಿನ ಪ್ಲಾಸ್ಟಿಕ್ ದಾಸ್ತಾನಿಗೆ ಮೊದಲ ಬಾರಿಗೆ ರೂ.10,000 ಹಾಗೂ
ಎರಡನೇ ಬಾರಿಗೆ ರೂ. 20,000 ಹಾಗೂ 100 ಕೆ.ಜಿ ಗೂ ಅಧಿಕ ಪ್ಲಾಸ್ಟಿಕ್ ದಾಸ್ತಾನಿಗೆ ಮೊದಲ ಬಾರಿಗೆ ರೂ. 40,000 ಹಾಗೂ ಎರಡನೇ ಬಾರಿಗೆ ರೂ.
50,000 ದಂಡ ವಿಧಿಸಲಾಗುವುದು. ಇದರ ಹೊರತಾಗಿಯೂ ಪ್ಲಾಸ್ಟಿಕ್ ದಾಸ್ತಾನು ಕಂಡು ಬಂದಲ್ಲಿ ಅಂತಹ ಉದ್ದಿಮೆಯ ಪರವಾನಿಗೆಯನ್ನು ರದ್ದುಪಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು.

ಪ್ಲಾಸ್ಟಿಕ್ ಬಳಕೆ ನಿಯಂತ್ರಿಸುವ ನಿಟ್ಟಿನಲ್ಲಿ ನಗರಸಭೆ ವತಿಯಿಂದ ಹಲವು ಬಾರಿ ಹೊಟೇಲ್, ಗೂಡಂಗಡಿ, ಫಾಸ್ಟ್ ಫುಡ್ ಅಂಗಡಿಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ನಾನು ಪ್ಲಾಸ್ಟಿಕ್ ಅಲ್ಲ, ಬಯೋಡಿಗ್ರೇಡೆಬಲ್ ಪ್ಲಾಸ್ಟಿಕ್(ಕರಗುವ ಪ್ಲಾಸ್ಟಿಕ್) ಎಂಬ ಬರಹಗಳು ಮುದ್ರಿತಗೊಂಡಿರುವ ಪ್ಲಾಸ್ಟಿಕ್ ಚೀಲಗಳು ಬಳಸುತ್ತಿರುವುದು ಕಂಡು ಬಂದಿರುತ್ತವೆ. ಇಂತಹ ಪ್ಲಾಸ್ಟಿಕ್‌ ಅನ್ನು ಕೂಡಾ ಯಾವುದೇ ಕಾರಣಕ್ಕೂ ಬಳಸುವಂತಿಲ್ಲ. ಅದಾಗ್ಯೂ ಇಂತಹ ಬಯೋಡಿಗ್ರೇಡೇಬಲ್ ಪ್ಲಾಸ್ಟಿಕ್ ಬಳಕೆ, ಮಾರಾಟ ಅಥವಾ ತಯಾರಿಸುವುದು ಕಂಡು ಬಂದಲ್ಲಿ ಅಂತಹವರಿಗೂ ಮೇಲೆ ತಿಳಿಸಲಾದ ದಂಡ ಹಾಗೂ ನಿಯಮವೇ ಅನ್ವಯವಾಗಲಿದೆ ಎಂದು ನಗರಸಭೆ
ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.