ಉಡುಪಿ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ಸುಕೃತಿ 2025’ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಇದೇ ಎ.30 ಮತ್ತು ಮೇ 1 ರಂದು ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿದ್ವಾಂಸ, ನಿವೃತ್ತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಏ.30ರ ಬೆಳಿಗ್ಗೆ 8.30 ಕ್ಕೆ ಧ್ವಜಾರೋಹಣ ನೆರವೇರಲಿದೆ. ಬಳಿಕ ಬೆಳಿಗ್ಗೆ 9ಗಂಟೆಗೆ ಸಮ್ಮೇಳನಾಧ್ಯಕ್ಷರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗುವುದು. ಅದೇ ಸಮಯದಲ್ಲಿ ವಿಪಂಚಿ ಬಳಗ ಮಣಿಪಾಲ ಇವರಿಂದ ವೀಣಾವಾಣಿ ಕಾರ್ಯಕ್ರಮ ನಡೆಯಲಿದೆ ಎಂದರು.
ಅಂದು ಬೆಳಿಗ್ಗೆ 9.45ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶೀಂಧ್ರತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯ ಕಸಾಪ ಅಧ್ಯಕ್ಷ ನಾಡೋಜ ಮಹೇಶ್ ಜೋಷಿ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣ ಮಾಡಲಿದ್ದಾರೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಪುಸ್ತಕ ಮಳಿಗೆ ಉದ್ಘಾಟಿಸಲಿದ್ದಾರೆ. ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಹಿರಿಯ ವಿದ್ವಾಂಸ ಬಾಬು ಶಿವ ಪೂಜಾರಿ ಅವರು ಮಾತನಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಡಾ. ಪಾದೇಕಲ್ಲು ವಿಷ್ಣುಭಟ್ ರವರ ಗ್ರಂಥಾವಲೋಕನ, ಡಾ. ಮಂಜುನಾಥ ಕರಬರ ಕೆಂಪುಚುಕ್ಕಿ ಭಾವರೆಕ್ಕೆ, ಪೂರ್ಣೇಶ ಶಿವಪುರರವರ ಪೂರ್ಣಕುಂಭ ಪುಸ್ತಕ ಬಿಡುಗಡೆಗೊಳಿಸುವರು ಎಂದು ತಿಳಿಸಿದರು.
ಬೆಳಿಗ್ಗೆ 11:30 ರಿಂದ ಭಾಷಾ ಸೌಹಾರ್ದ ವಿಷಯವಾಗಿ ಮೊದಲ ವಿಚಾರಗೋಷ್ಠಿ ನಡೆಯಲಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹಾಗೂ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ವಿಚಾರ ಮಂಡನೆ ಮಾಡಲಿದ್ದಾರೆ. ಬಳಿಕ ಶತಮಾನದ ಸಾಧಕರ ವಿಷಯವಾಗಿ ವಿಶೇಷ ಉಪನ್ಯಾಸ ನಡೆಯಲಿದ್ದು, ಶಾಸನ ಹಸ್ತಪ್ರತಿ ಸಂರಕ್ಷಕ ಎಸ್.ವಿ ಕೃಷ್ಣಯ್ಯ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 1.30 ರಿಂದ ತಾಳಮದ್ದಳೆ ನಡೆಯಲಿದ್ದು, ಆ ಬಳಿಕ ಡಾ.ಬಿ.ಬಿ. ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ಜರುಗಲಿದೆ.
ಮಧ್ಯಾಹ್ನ 2.30 ರಿಂದ ಎರಡನೇ ವಿಚಾರಗೋಷ್ಠಿ ನಡೆಯಲಿದೆ. ಬಳಿಕ ಕಸಾಪ ಪೂರ್ವಾಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳ ಅವರಿಗೆ ಗೌರವಾರ್ಪಣೆ ನಡೆಯಲಿದೆ. ಬಳಿಕ ಉಡುಪಿ ಪೂರ್ಣಪ್ರಜ್ಞ ಕಾಲೇಜು ಹಾಗೂ ಎಂಜಿಎಂ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಸಂಜೆ 5:45 ರಿಂದ ಮಠದ ದೈನಂದಿನ ಕಾರ್ಯಕ್ರಮ ಬಳಿಕ ಸಂಜೆ 7 ರಿಂದ ನೃತ್ಯವಸಂತ ನಾಟ್ಯಾಲಯ ಕುಂದಾಪುರ ತಂಡದಿಂದ ನೃತ್ಯ ಸಿಂಚನ ನಡೆಯಲಿದೆ ಎಂದು ಹೇಳಿದರು.
ಮೇ 1ರ ಗುರುವಾರ ಬೆಳಿಗ್ಗೆ ಪರ್ಕಳ ಸರಿಗಮ ಭಾರತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಅರುಣರಾಗ”, ಬಳಿಕ ಬೆಳಿಗ್ಗೆ 10 ರಿಂದ ಕವಿಗೋಷ್ಠಿ, ಬಳಿಕ ನಮ್ಮ ಉಡುಪಿ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಶೈಕ್ಷಣಿಕ ಮನ್ವಂತರ ವಿಷಯವಾಗಿ ಡಾ. ಅಶೋಕ್ ಕಾಮತ್, ಶಾಸನಗಳ ಸಮೀಕ್ಷೆ ವಿಷಯದಲ್ಲಿ ಡಾ.ಬಿ.ಜಗದೀಶ್ ಶೆಟ್ಟಿ, ಚಲನಚಿತ್ರ ಸಾಧನೆ ವಿಷಯದಲ್ಲಿ ಯಾಕೂಬ್ ಖಾದರ್ ಗುಲ್ವಾಡಿ ಹಾಗೂ ಪ್ರವಾಸೋದ್ಯಮ ವಿಷಯದಲ್ಲಿ ದಯಾನಂದ ಕರ್ಕೆರ ಉಗ್ನಲ್ ಬೆಟ್ಟು ಮಾತನಾಡಲಿದ್ದಾರೆ.
ಮಧ್ಯಾಹ್ನ ತೆಂಕನಿಡಿಯೂರು ಕಾಲೇಜು ಹಾಗೂ ಶಿರ್ವ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಲಿದೆ. ಮಧ್ಯಾಹ್ನ 1 ರಿಂದ ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಎಲ್ ಧರ್ಮ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದದ ನಡೆಸಲಿದ್ದಾರೆ. ಮಧ್ಯಾಹ್ನ ಸಮ್ಮೇಳನಾಧ್ಯಕ್ಷರೊಂದಿಗೆ ಒಂದಿಷ್ಟು ಹೊತ್ತು ಮಾತುಕತೆ ನಡೆಯಲಿದೆ. ಬಳಿಕ ಬಹಿರಂಗ ಅಧಿವೇಶನ ನಡೆಯಲಿದೆ.
ಅಂದು ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಶ್ರೀ ಸುಶೀಂಧ್ರತೀರ್ಥ ಶ್ರೀಪಾದರು ಆರ್ಶೀವಚನ ನೀಡಲಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. .
… ಸಾಧಕರಿಗೆ ಸನ್ಮಾನ…..
ಡಾ. ಗಜೇಂದ್ರ ಗುಂಡ್ಮಿ (ಶಿಕ್ಷಣ), ಡಾ. ರವೀಂದ್ರ ಶೆಟ್ಟಿ ಬಜಗೋಳಿ (ಶಿಕ್ಷಣ ಮತ್ತು ಸಂಘಟನೆ), ಪ್ರತಾಪ್ ಕುಮಾರ್ ಉದ್ಯಾವರ (ಶಿಕ್ಷಣ ಮತ್ತು ಸಮಾಜ ಸೇವೆ), ರಂಗಪ್ಪಯ್ಯ ಹೊಳ್ಳ (ಸಂಕೀರ್ಣ), ಸುಗುಣ ಮೂಲ್ಯ ಪಡುಬಿದ್ರಿ ಕಂಚಿನಡ್ಕ (ಸಮಾಜ ಸೇವೆ), ಉದಯ ಕುಮಾರ್ ಶೆಟ್ಟಿ (ಸಂಕೀರ್ಣ), ಕೊಕೂಉ ಸೀತಾರಾಮ ಶೆಟ್ಟಿ (ಯಕ್ಷಗಾನ), ಸೂರಿ ಶೆಟ್ಟಿ ಕಾಪು ( ಸಮಾಜಸೇವೆ), ಅಪ್ಪು ಪಾಣಾರ ಶಿರ್ವ (ಪಾಡ್ದನ), ರಾಮಚಂದ್ರ ಆಚಾರ್ಯ ಪಡುಬಿದ್ರಿ (ಪತ್ರಕರ್ತರು), ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ (ಯಕ್ಷಗಾನ), ಸೀತಾ ಶ್ರೀನಿವಾಸ ಪಡುವರಿ (ಸಾಹಿತ್ಯ), ಈಶ್ವರ ಮಲ್ಪೆ (ಸಮಾಜ ಸೇವೆ), ರವಿ ಕಟಪಾಡಿ (ಸಮಾಜಸೇವೆ) ಯೋಗೀಶ್ ಭಟ್ ಹಳ್ಳಿ (ಸಂಕೀರ್ಣ), ವಿದುಷಿ ಸಂಸ್ಕೃತಿ ಪ್ರಭಾಕರ (ಯುವ ಪ್ರತಿಭೆ), ಯಡ್ತಾಡಿ ಸತೀಶ್ ಕುಮಾರ್ ಶೆಟ್ಟಿ (ಪ್ರಗತಿಪರ ಕೃಷಿಕ), ಸಂಘಸಂಸ್ಥೆಗಳ ವಿಭಾಗದಲ್ಲಿ ಕ್ರಿಯೇಟಿವ್ ಪುಸ್ತಕ ಮನೆ, ಭೂಮಿಕಾ ಹಾರಾಡಿ ರಿ. ಪಂಚಮಿ ಟ್ರಸ್ಟ್ ರಿ. ಉಡುಪಿ, ಭಾರತೀಯ ರೆಡ್ ಕ್ರಾಸ್ ಕುಂದಾಪುರ ಶಾಖೆ, ಶ್ರೀ ಜಟ್ಟಿಗೇಶ್ವರ ಯೂತ್ ಕ್ಲಬ್ ರಿ, ಲೈಟ್ ಹೌಸ್ ಗಂಗೊಳ್ಳಿ, ಸುನಿಲ್ ಬೈಂದೂರು ( ಕುಂದಾಪ್ರ ಡಾಟ್.ಕಾಂ) ಇವರುಗಳಿಗೆ ಸನ್ಮಾನ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಶೆಟ್ಟಿ, ಕೋಟ ನರೇಂದ್ರ ಕುಮಾರ್, ಸದಸ್ಯ ನರಸಿಂಹಮೂರ್ತಿ ಮಣಿಪಾಲ, ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಭಟ್ ಉಪಸ್ಥಿತರಿದ್ದರು.












