ಎ.30ರಂದು ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ಸೇವೆ

ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಅಕ್ಷಯ ತೃತೀಯಾ ಪರ್ವದಿನವಾದ ಎ. 30ರಂದು ಸಂಜೆ 4ಕ್ಕೆ ಶ್ರೀಕೃಷ್ಣ ಮಠದ ವಸಂತ ಮಹಲ್ ಮಧ್ವ ಮಂಟಪದಲ್ಲಿ ಶ್ರೀಕೃಷ್ಣನಿಗೆ ಸುವರ್ಣ ತುಲಾಭಾರ ನಡೆಯಲಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಉಡುಪಿ ಕೃಷ್ಣಮಠದ ಗೀತಾಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಲಾಭಾರ ಸ್ಥಳದಲ್ಲಿ ಚಿನ್ನ ಖರೀದಿಸಿ ನೇರ ಸಮರ್ಪಿಸಲು ಹಾಗೂ ಹಳೇ ಚಿನ್ನ ನೀಡಲು ಅವಕಾಶವಿದೆ. ಜತೆಗೆ ಶ್ರೀಕೃಷ್ಣನ ಮೂಲ ವಿಗ್ರಹಕ್ಕೆ ಕನಕಾಭಿಷೇಕ ಮಾಡಿದ ಸುವರ್ಣ ಪ್ರಸಾದ ಪಡೆಯಬಹುದು. ಕೃಷ್ಣ ತುಲಾಭಾರಕ್ಕೆ ಬಳಸಿದ ಚಿನ್ನವನ್ನು ನೂತನ ಪಾರ್ಥಸಾರಥಿ ಸುವರ್ಣ ರಥಕ್ಕೆ ಉಪಯೋಗಿಸಲಾಗುವುದು. ಪಾರ್ಥಸಾರಥಿ ರಥವು ಸುಮಾರು 18 ಕೋ.ರೂ. ವೆಚ್ಚದಲ್ಲಿ ಸಿದ್ಧವಾಗಲಿದೆ. ಭಕ್ತರು ತಮ್ಮ ಸೇವೆಯನ್ನು ಆನ್‌ಲೈನ್ ಮೂಲಕವೂ ಬುಕ್ ಮಾಡಬಹುದು. ಅಂಚೆ ಮೂಲಕವೂ ಪ್ರಸಾದ ಪಡೆಯಬಹುದು ಎಂದು ಅವರು ತಿಳಿಸಿದರು.

ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ರಮೇಶ್ ಭಟ್ ಉಪಸ್ಥಿತರಿದ್ದರು.