ಎಸ್. ಕೆ. ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ 6.09 ಕೋಟಿ ರೂ. ಲಾಭ: ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ

ಮಂಗಳೂರು: ವಜ್ರಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿ 2024-25ನೇ ಸಾಲಿನಲ್ಲಿ 1292.45 ಕೋಟಿ ರೂ. ವ್ಯವಹಾರ ನಡೆಸಿ 6.09 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ.

1964ರಲ್ಲಿ ದೇವಮಾನವ ದಿ|ಪಾಲ್ಕೆ ಬಾಬುರಾಯ ಆಚಾರ್ಯರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಎಸ್.ಕೆ.ಗೋಲ್ಡ್‌ಸ್ಮಿತ್ಸ್‌ ಇಂಡಸ್ಟ್ರಿಯಲ್‌ ಕೋ-ಆಪರೇಟಿವ್ ಸೊಸೈಟಿಯು ಒಟ್ಟು 22848 ಸದಸ್ಯ ರಿಂದ 7.03 ಕೋಟಿ ರೂ ಪಾಲು ಬಂಡವಾಳ ಹೊಂದಿದೆ. ಒಟ್ಟು ಠೇವಣಿ 253.86 ಕೋಟಿ ರೂ. ಇದ್ದು, ಸದಸ್ಯ/ಗ್ರಾಹಕರಿಗೆ ಚಿನ್ನಾಭರಣ ಸಾಲ, ಜಾಮೀನು ಸಾಲ, ವಾಹನ ಖರೀದಿ ಸಾಲ, ಆಸ್ತಿ ಅಡವು / ಗೃಹ ನಿರ್ಮಾಣ ಸಾಲ, ಯಂತ್ರೋಪಕರಣ ಸಾಲ, ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಲ ಹಾಗೂ ನಿಬಡ್ಡಿಯಲ್ಲಿ ಸೋಲಾರ್ ಯಂತ್ರೋಪಕರಣ ಸಾಲ ನೀಡುತ್ತಿದ್ದು ವರ್ಷಾಂತ್ಯಕ್ಕೆ ರೂ.240.32 ಕೋಟಿ ಹೊರಬಾಕಿ ಸಾಲ ಇದ್ದು ಡಿಮ್ಯಾಂಡ್ ಮೇಲೆ ಸುಸ್ತಿ ಬಾಕಿ ಪ್ರಮಾಣ ಶೇ.2.76 ಆಗಿರುತ್ತದೆ. ಕಳೆದ ಸಾಲಿನಲ್ಲಿ ಸುಸ್ತಿ ಬಾಕಿ ಶೇ.3.77 ಇದ್ದು ಶೇ.1.01 ಕಡಿಮೆಯಾಗಿರುತ್ತದೆ. ಸಂಸ್ಥೆಯು 26.22 ಕೋಟಿ ನಿಧಿ, 288.03 ಕೋಟಿ ರೂ. ದುಡಿಯುವ ಬಂಡವಾಳದೊಂದಿಗೆ 51.49 ಕೋಟಿ ರೂ. ಧನವಿನಿಯೋಗಗಳನ್ನು ಹೊಂದಿರುತ್ತದೆ. 01 ಕೈಗಾರಿಕಾ ಶಾಖೆ ಹೊಂದಿದ್ದು 17 ಬ್ಯಾಂಕಿಂಗ್ ಶಾಖೆಗಳನ್ನು ಹೊಂದಿದೆ. ಆಡಳಿತ ಕಛೇರಿ ಸಹಿತ ಆರು ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿವೆ.

ಉತ್ತಮ ಸಹಕಾರಿ ಸಂಘ ಪ್ರಶಸ್ತಿ:
ವಜ್ರ ಮಹೋತ್ಸವದ ಪ್ರಯುಕ್ತ 60 ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು 51 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ವಿದ್ಯಾರ್ಥಿವೇತನ ಮತ್ತು ಪ್ರತಿಭಾ ಪುರಸ್ಕಾರ, ವೈದ್ಯಕೀಯ ಶಿಬಿರ, ವನಮಹೋತ್ಸವ, ಸದಸ್ಯರಿಗೆ ಕ್ರೀಡಾಕೂಟ, ಸಾರ್ವಜನಿಕರ ಉಪಯೋಗಕ್ಕೆ ಪ್ಯೂರಿಫೈಡ್ ಕುಡಿಯುವ ನೀರಿನ ವ್ಯವಸ್ಥೆ, ಅನುದಾನಿತ ಶಾಲೆಗಳಿಗೆ ಅಗತ್ಯ ವಸ್ತುಗಳ ಪೂರೈಕೆ, ನಿರಾಶ್ರಿತರಿಗೆ ಮತ್ತು ಹಿರಿಯರ ಮನೆ ಅರೈಕೆ ಮಾಡುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಸೌಲಭ್ಯ, ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತೀರಾ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಮುಂತಾದ ಕಾರ್ಯಕ್ರಮಗಳು ನಡೆದಿವೆ.

ಪ್ರಸ್ತುತ ಆಡಳಿತ ಕಛೇರಿ ಹಾಗೂ ಕೊಟ್ಟಾರ ಚೌಕಿ ಶಾಖೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಸಂಸ್ಥೆಯ ಪ್ರಗತಿಗೆ ಪೂರಕವೆಂಬಂತೆ ಎರಡು ಬಾರಿ ರಾಜ್ಯದ ಉತ್ತಮ ಸಹಕಾರ ಸಂಘ ಪ್ರಶಸ್ತಿ, ಎರಡು ಬಾರಿ ಜಿಲ್ಲೆಯ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, ಎರಡು ಬಾರಿ ರಾಜ್ಯದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ, ಏಳು ಬಾರಿ ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಿಂದ “ಸಾಧನಾ ಪ್ರಶಸ್ತಿ”, 2023 -2024ರಲ್ಲಿ ಎರಡು ಬಾರಿ ಸಹಕಾರಿ ಸಪ್ತಾಹದ ಮೂಲಕ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ಪಡೆದ ಹೆಗ್ಗಳಿಗೆ ನಮ್ಮ ಸಂಸ್ಥೆಯದಾಗಿರುತ್ತದೆ ಎಂದು ಪಿ.ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ.