ಎಪ್ರಿಲ್ 9 ರಿಂದ 13 ರವರೆಗೆ ಪೆರ್ಣಂಕಿಲ ದೇವಸ್ಥಾನದಲ್ಲಿ “ಭಕ್ತಿ ಸಿದ್ಧಾಂತೋತ್ಸವ – ರಾಮೋತ್ಸವ”

ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಎಪ್ರಿಲ್ 9ರಿಂದ 13ರ ವರೆಗೆ ‘ಭಕ್ತಿ ಸಿದ್ಧಾಂತೋತ್ಸವ – ಶ್ರೀ ರಾಮೋತ್ಸವ’ ಶೀರ್ಷಿಕೆಯಡಿ ವೈಭವದ ಮಹೋತ್ಸವ ನಡೆಯಲಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮ್ಮೇಳನದ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ವಿದ್ವಾನ್ ನಿಟ್ಟೆ ಪ್ರಸನ್ನಾಚಾರ್ಯ ಅವರು, ಶ್ರೀ ಪೇಜಾವರ ಮಠ, ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ, ಅಖಿಲ ಭಾರತ ಮಾಧ್ವ ಮಹಾಮಂಡಲ ಇವುಗಳ ಆಶ್ರಯದಲ್ಲಿ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಈ ಸಮ್ಮೇಳನ ನಡೆಯಲಿದೆ.

ಎ. 10ರಂದು ಶ್ರೀಮನ್ನ್ಯಾಯ ಸುಧಾಮಂಗಲೋತ್ಸವ, ಎ. 11 ಮತ್ತು 12ರಂದು ತತ್ವಜ್ಞಾನ‌ ಸಮ್ಮೇಳನ ನಡೆಯಲಿದ್ದು, ಸುಮಾರು 1800ಕ್ಕೂ ಅಧಿಕ ವಿದ್ವಾಂಸರು ಭಾಗವಹಿಸುತ್ತಿದ್ದಾರೆ. ಅಲ್ಲದೆ, 25 ಬೇರೆ ಬೇರೆ ಶಾಸ್ತ್ರವಿಷಯಾಧಾರಿತ ವಿದ್ವತ್ ಗೋಷ್ಠಿಗಳು, ಮಹಿಳಾ ಗೋಷ್ಠಿ, ಸಂಗೀತ ಗೋಷ್ಠಿ, ಯುವ ಗೋಷ್ಠಿಗಳು ನಡೆಯಲಿವೆ.

ಆಧ್ಯಾತ್ಮಿಕ ಪುಸ್ತಕ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಟಿಟಿಡಿ ದಾಸಸಾಹಿತ್ಯ ಪ್ರಾಜೆಕ್ಟಿನ ನೂರಾರು ಭಜನಾಮಂಡಳಿಗಳ 2500ಕ್ಕೂ ಅಧಿಕ ಮಾತೆಯರಿಂದ ಹರಿನಾಮ ಸಂಕೀರ್ತನೋತ್ಸವ ಜರುಗಲಿದೆ ಎಂದರು.

ಎ. 13ರಂದು ಸಂಜೆ 3.30 ರಿಂದ 6 ರವರೆಗೆ ಸಂತ ಸಂಗಮ- ಬೃಹತ್ ಹಿಂದು ಸಮಾಜೋತ್ಸವ ನಡೆಯಲಿದ್ದು, ನಾಡಿನ 20 ಕ್ಕೂ ಮಠಾಧೀಶರು, ಸಾಧು ಸಂತರು ಭಾಗವಹಿಸಿ ಶ್ರೀರಾಮಾಯಣಾಧಾರಿತ ರಾಮನ ದಿವ್ಯ ಸಂದೇಶ ನೀಡಲಿದ್ದಾರೆ. ಪ್ರತಿದಿನ ಸಂಜೆ 6ಗಂಟೆಗೆ ಧರ್ಮಸಭೆ, ಸಂಜೆ 7.30ರಿಂದ ಪ್ರಸಿದ್ಧ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಯುವ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ, ಖ್ಯಾತ ಡ್ರಮ್ಸ್ ವಾದಕ ಶಿವಮಣಿ ಮತ್ತು ಬಳಗದವರಿಂದ ಸಂಗೀತ ಕಾರ್ಯಕ್ರಮ, ಜಗದೀಶ ಪುತ್ತೂರು ಬಳಗದವರ ಭಕ್ತಿ ಸಂಗೀತ, ಡಾ. ಎಲ್. ಸುಬ್ರಹ್ಮಣ್ಯಂ ಮತ್ತು ಕವಿತಾ ಕೃಷ್ಣಮೂರ್ತಿ ಅವರಿಂದ ಶಾಸ್ತ್ರೀಯ ಸಂಗೀತ ವಯಲಿನ್ ವಾದನ ನಡೆಯಲಿದೆ ಎಂದು ತಿಳಿಸಿದರು.

ನಾಲ್ಕು ದಿನಗಳ ಕಾಲ ಚತುರ್ವೇದ ರಾಮಾಯಣ ಮಹಾಭಾರತ ಭಾಗವತ ಪಾರಾಯಣ ಗಳು ,ಗಣಪತಿ ದೇವರಿಗೆ ಗಣಯಾಗ ಕೊಪ್ಪರಿಗೆ ಅಪ್ಪ ಸೇವೆ , ಸಮಾಜದಲ್ಲಿನ‌ಅಪಮೃತ್ಯು ಅಕಾಲ ಮೃತ್ಯು ಕಂಟಕಗಳ ನಿವಾರಣೆಗಾಗಿ ಪ್ರಾರ್ಥಿಸಿ ಮನ್ಯುಸೂಕ್ತ ಯಾಗ ಮಹಾಮೃತ್ಯುಂಜಯ ಯಾಗ , ಗೋವಂಶ ರಕ್ಷಣೆಗಾಗಿ ಇತ್ತೀಚೆಗೆ ಶ್ರೀಗಳ ಮಾರ್ಗದರ್ಶನದಂತೆ ನಡೆದ ಕೋಟಿ ವಿಷ್ಣುಸಹಸ್ರನಾಮ‌ ಪಾರಾಯಣ ಸಮರ್ಪಣಾಂಗ ಲಕ್ಷ ವಿಷ್ಣು ಸಹಸ್ರನಾಮ‌ಯಾಗ , ಗೋಸೂಕ್ತ ಯಾಗ , ಮಾರ್ಚ್ 15 ರಿಂದ 30 ರ ವರೆಗೆ ಜಿಲ್ಲೆಯಲ್ಲಿ 40 ಸಾವಿರಕ್ಕೂ ಅಧಿಕ ರಾಮಭಕ್ತರಿಂದ ನಡೆಯುತ್ತಿರುವ ದಶಕೋಟಿ ರಾಮ ತಾರಕ ಮಂತ್ರ ಜಪಯಜ್ಞ ಸಮರ್ಪಣಾಂಗ ಬೃಹತ್ ರಾಮತಾರಕ ಮಂತ್ರ ಯಾಗಗಳು ನಡೆಯಲಿವೆ.

ಈ ಮಹೋತ್ಸವದ ಭಾಗವಾಗಿ ಮಾರ್ಚ್ 30 ರಿಂದ ಎಪ್ರಿಲ್ 9 ರ ವರೆಗೆ ಜಗದ್ಗುರು ಮಧ್ವಾಚಾರ್ಯರ ಜನ್ಮಸ್ಥಳ ಪಾಜಕ ಕ್ಷೇತ್ರದಿಂದ ಆರಂಭಿಸಿ ಉಡುಪಿ ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಭಕ್ತಿರಥಯಾತ್ರೆಯು ನಡೆಯಲಿದೆ .‌ಈ ಸಂಬಂಧ ಈಗಾಗಲೇ 30 ಕ್ಕೂ ಅಧಿಕ ಕಡೆಗಳಲ್ಲಿ ವಿಶ್ವ ಹಿಂದು ಪರಿಷತ್ ಸಹಯೋಗದಲ್ಲಿ ರಥಯಾತ್ರೆ ಸ್ವಾಗತಕ್ಕೆ ಸಿದ್ಧತೆಗಳು ನಡೆಯುತ್ತಿವೆ.

ಉಡುಪಿಯ ಬ್ರಾಹ್ಮಣ ಮಹಾಸಭಾ ಹಾಗೂ ಇತರ ಬ್ರಾಹ್ಮಣ ಸಂಘಟನೆಗಳ ಸಹಯೋಗದಲ್ಲಿ ವಿಪ್ರರ ಮನೆಮನೆಗಳಲ್ಲಿ ಲಕ್ಷ ವಿಷ್ಣು ಸಹಸ್ರನಾಮ‌ಪಾರಾಯಣ ಹಾಗೂ ದಶಸಹಸ್ರ ಲಕ್ಷ್ಮೀ ಶೋಭಾನೆ ಗಾಯನ ಅಭಿಯಾನವೂ ನಡೆಯುತ್ತಿದ್ದು ಪೆರಣಂಕಿಲದಲ್ಲೂ ನೂರಾರು ಜನ ವಿಪ್ರರಿಂದ ಸಹಸ್ರ ನಾಮ‌ಪಾರಾಯಣ ಹಾಗೂ ಲಕ್ಷ್ಮೀಶೋಭಾನೆ ಸಾಮೂಹಿಕ ಗಾಯನ ನಡೆಯಲಿದೆ. ಆಯುರ್ವೇದ ಹಾಗೂ ಅಲೋಪತಿ ವೈದ್ಯರುಗಳಿಂದ ಆರೋಗ್ಯ ತಪಾಸಣಾ ಶಿಬಿರವೂ ಜರುಗಲಿದೆ.

ಎಪ್ರಿಲ್ 13 ರ ಸಂಜೆ ನಡೆಯುವ ಸಂತ ಸಂಗಮ‌‌ಹಿಂದು ಸಮಾವೇಶಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಆಹ್ವಾನಿಸಲಾಗಿದ್ದು, ಬರುವ ನಿರೀಕ್ಷೆ ಇದೆ.

ಮೂವರು ಸಮ್ಮೇಳನಾಧ್ಯಕ್ಷರು.

ನಾಲ್ಕು ದಿನಗಳ ಈ ಮಹೋತ್ಸವಕ್ಕೆ ಮೂವರು ಹಿರಿಯ ಸಾಧಕರನ್ನು ಸಮ್ಮೇಳನಾಧ್ಯಕ್ಷರಾಗಿ ನಿಯೋಜಿಸಲಾಗಿದೆ. ಕುಂಭಾಸಿ ವಿನಾಯಕ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರರೂ ಆಗಿರುವ ಧರ್ಮದರ್ಶಿ ಕೆ ಸೂರ್ಯನಾರಾಯಣ ಉಪಾಧ್ಯಾಯರು, ಧರ್ಮಬೀರುಗಳು ಆಗಿರುವ ಕೆ ರಾಮ್ ಪ್ರಸಾದ್ ಭಟ್, ವಿದ್ವಾಂಸ‌ ವಿದ್ವಾನ್ ಪೆರಣಂಕಿಲ ಹರಿದಾಸ ಭಟ್ಟರು ಸಮ್ಮೇಳನಾಧ್ಯಕ್ಷರಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಠದ ದಿವಾನರಾದ ಎಂ‌.ರಘು ರಾಮಾಚಾರ್ಯರು, ಸಿಇಒ ಸುಬ್ರಹ್ಮಣ್ಯ ಭಟ್ , ಸಮತಿಯ ಪ್ರಮುಖ ಪದಾಧಿಕಾರಿಗಳಾದ ಸಗ್ರಿ ಅನಂತ ಸಾಮಗ, ಡಾ ಸಗ್ರಿ ಆನಂದತೀರ್ಥಾಚಾರ್ಯ, ವಿದ್ವಾನ್ ಕೃಷ್ಣರಾಜ ಕುತ್ಪಾಡಿ , ಕೆ ರಾಮಚಂದ್ರ ಉಪಾಧ್ಯಾಯ , ಪೆರಣಂಕಿಲ ಶ್ರೀಶ ನಾಯಕ್ , ಪೆರಣಂಕಿಲ ದೇವಸ್ಥಾನದ ಮುಖ್ಯ ವ್ಯವಸ್ಥಾಪಕರಾದ ವಿಷ್ಣುಮೂರ್ತಿ ಆಚಾರ್ಯ , ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು. .